ಕರಾವಳಿ

ಮೀನಿನ ನೆಂಟ ಕುಂಬ್ರದ ಸಾದಿಕ್:
ಜೇನು-ಮೀನು ಇವರಿಗೆ ಅತೀ ಹತ್ತಿರ..!



ಈತ ವೃತ್ತಿಯಲ್ಲಿ ಎಲೆಕ್ಟ್ರಿಶಿಯನ್. ನಿತ್ಯ ತನ್ನ ಕೆಲಸದ ಒತ್ತಡದಲ್ಲಿ ಬ್ಯುಸಿ. ಆದರೂ ತನ್ನ ಕೆಲಸದ ಮಧ್ಯೆ ಮೀನು ಹಿಡಿಯುವ ಮತ್ತು ಜೇನು ತೆಗೆಯುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಈತನ ಜೊತೆ ಒಂದಷ್ಟು ಯುವಕರ ದಂಡು ಕೂಡಾ ಇದೆ. ಮೀನು ಹಿಡಿಯುವ, ಜೇನು ತೆಗೆಯುವ ತಂಡದ ನೇತೃತ್ವವೂ ಈತನಿಗೆ. ಅವರೇ ಕುಂಬ್ರ ಸಮೀಪದ ಮಗಿರೆಯ ಸಾದಿಕ್.





ಪ್ರತೀ ಬೇಸಿಗೆಯ ಕೊನೆ ದಿನಗಳಲ್ಲಿ ಇವರ ತಂಡಕ್ಕೆ ಹೊಳೆಯಲ್ಲಿ ಮೀನು ಹಿಡಿಯುವುದೇ ಹವ್ಯಾಸ. ಕಳೆದ ಎಂಟು ವರ್ಷಗಳ ಹಿಂದೆ ಹುಟ್ಟಿಕೊಂಡ ಇವರ ಹವ್ಯಾಸ ಇಂದು ಭಾರೀ ಗಾತ್ರದ ಮೀನುಗಳನ್ನು ಹಿಡಿಯುವ ಮೂಲಕ ಸುದ್ದಿಯಾಗುತ್ತಿದ್ದಾರೆ.







ಒಳಮೊಗ್ರು ಗ್ರಾಮದ ಅಡ್ಕ ನಿವಾಸಿ ಅಟೋ ಚಾಲಕ ಹಂಝ ಮತ್ತು ಈ ಸಾದಿಕ್ ಜೊತೆಯಾದರೆ ಸಾಕು ಎಂಥ ಮೀನುಗಳೂ ಕೂಡಾ ಇವರ ಬಲೆಯೊಳಗೆ ಬಂದು ಬಿಡುತ್ತದೆ. ಇವರು ಮೀನು ಹಿಡಿಯಲು ಹೊರಟರೆ ಇವರ ಕೈಯಿಂದ ಯಾವುದೇ ಮೀನು ತಪ್ಪಿಸಿಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಇವರಿಬ್ಬರು ಹೊಳೆಗೆ ಇಳಿದರೆ ಸಾಕು ಮೀನುಗಳೇ ಇವರ ಬಳಿ ಬಂದು ನಮ್ಮನ್ನು ಹಿಡಿಯಿರಿ ಎಂದು ಹೇಳುವಂತೆ ಇವರ ಕೈಗಳಿಗೆ ಮೀನುಗಳು ಮುತ್ತಿಕೊಳ್ಳುತ್ತದೆ.





ಹೊಳೆಯ ಮೀನಿಗೆ ಭಾರೀ ಬೇಡಿಕೆ ಇದೆ, ಇದರ ರುಚಿಯೇ ಬೇರೆ. ಹೊಳೆಯಲ್ಲಿ ಸಿಗುವ ಭಾರೀ ಗಾತ್ರದ ಮೀನುಗಳಾದ ಮಲೆಜ್ಜಿ, ಮಡೆಂಜಿ, ಮುಗುಡು, ಬಾಳೆ, ನೊಳಿ ಸೇರಿದಂತೆ ಚಿಕ್ಕ ಗಾತ್ರದ ಮೀನುಗಳಾದ ಚೀರ್, ಕಲುಂಬುರ, ಕರಿ ಮೀನು, ಸರು ಸೇರಿದಂತೆ ಇನ್ನೊಂದಿಷ್ಟು ಮೀನುಗಳು. ಈ ಎಲ್ಲಾ ಜಾತಿಯ ಮೀನುಗಳು ಒಂದೆ ಗುಂಡಿಯಲ್ಲಿರುತ್ತದೆ. ಮಲೆಜ್ಜಿ ಮೀನಿನಲ್ಲಿ 14 ರಿಂದ 15 ಕೇಜಿ ತನಕದ ಮೀನುಗಳನ್ನು ಇವರು ಹಿಡಿದಿದ್ದಾರೆ. ಇವರು ಒಂದು ದಿನವೂ ಮೀನುಗಳನ್ನು ಹಣಕ್ಕೆ ಮಾರಾಟ ಮಾಡಿದ್ದಿಲ್ಲ. ಹಿಡಿದ ಮೀನು ಹೆಚ್ಚಾದರೆ ಸ್ನೇಹಿತರಿಗೆ ಹಂಚುವ ಮೂಲಕ ಎಲ್ಲರೂ ಹೊಳೆ ಮೀನಿನ ರುಚಿ ಅನುಭವಿಸುವಂತೆ ಮಾಡುತ್ತಾರೆ. ಇತ್ತೀಚೆಗೆ ಭಾರೀ ಗಾತ್ರದ ಮಲೆಜ್ಜಿ ಮೀನು ಸಿಕ್ಕಿದ್ದು ಇಷ್ಟು ದೊಡ್ಡ ಗಾತ್ರದ ಮಲೆಜ್ಜಿ ಸಿಕ್ಕಿರುವುದು ಮೊದಲ ಬಾರಿ ಎನ್ನುತ್ತಾರೆ ಸಾದಿಕ್.





ವರ್ಷದಲ್ಲಿ ಒಂದೇ ತಿಂಗಳು ಇವರು ಈ ಕೆಲಸದಲ್ಲಿ ನಿರತರಾಗುತ್ತಾರೆ. ಬಿಡುವಿನ ಸಮಯದಲ್ಲಿ ಮೀನು ಹಿಡಿಯುವ ಕಾಯಕ್ಕೆ ತೆರಳುವಾಗ ಒಂದಷ್ಟು ಸ್ನೇಹಿತರನ್ನು ಕರೆದುಕೊಂಡು ಹೋಗುತ್ತಾರೆ. ಕುಂಬ್ರ, ವಿಟ್ಲ, ಸುಳ್ಯ ಹೀಗೇ ಎಲ್ಲೆಲ್ಲಾ ನೀರು ಬತ್ತಿ ಹೋಗುವ ಹಂತದಲ್ಲಿರುವ ಗುಂಡಿಗಳಲ್ಲಿ ಮೀನು ಹಿಡಿಯುತ್ತಾರೆ. ನದಿಗಳಲ್ಲಿ ಮೀನು ಹಿಡಿಯುವಾಗ ಸ್ಥಳೀಯರನ್ನು ಕರೆದುಕೊಂಡು ಹೋಗುತ್ತಾರೆ. ಕೆಲವೊಂದು ಕಡೆಗಳಲ್ಲಿ ಕಯಾ ಇರುವ ಸಾಧ್ಯತೆ ಇದ್ದು ಅಪಾಯವನ್ನು ತಪ್ಪಿಸುವ ಉದ್ದೇಶದಿಂದ ಮಾಹಿತಿಗಾಗಿ ಒಬ್ಬ ಸ್ಥಳೀಯ ಇವರ ಜೊತೆಗಿರುವುದು ವಾಡಿಕೆ.





ಜೇನಿನಲ್ಲೂ ಸೈ:
ಇವರು ಕೇವಲ ಮೀನಿನಲ್ಲಿ ಮಾತ್ರವಲ್ಲ ಜೇನು ಸಂಗ್ರಹದಲ್ಲೂ ಎತ್ತಿದ ಕೈ. ಎಲ್ಲೇ ಎಷ್ಟೇ ದೊಡ್ಡ ಜೇನಿರಲಿ ಅದನ್ನು ಜೇನು ಇದ್ದರೆ ಸಲೀಸಾಗಿ ತೆಗೆಯುತ್ತಾರೆ. ಇವರಿಗೆ ನೊಣಗಳು ಕಚ್ಚುವುದೇ ಇಲ್ಲ. ಇವರಲ್ಲಿ ಅದೇನು ಕರಾಮತ್ತು ಇದೆಯೋ ಗೊತ್ತಿಲ್ಲ. ಮರಗಳಲ್ಲಿ, ಹುತ್ತಗಳಲ್ಲಿ ಜೇನು ಸಂಗ್ರಹ ಮಾಡುವುದರಲ್ಲಿಯೂ ಇವರಿಬ್ಬರೂ ಪ್ರವೀಣರು. ಇದುವರೆಗೂ ಇವರಿಬ್ಬರ ಕೈಗೆ ಒಂದೇ ಒಂದು ಜೇನು ನೊಣ ಕಚ್ಚಿದ ಉದಾಹರಣೆ ಇಲ್ಲದೇ ಇರುವುದು ಇವರ ಸಾಹಸಕ್ಕೆ ಉದಾಹರಣೆ.





ಕಳೆದ ಹಲವು ವರ್ಷಗಳಿಂದ ಮೀನು ಹಿಡಿಯುವವರು ನೀರಿಗೆ ವಿಷ ಹಾಕದೇ ಇರುವ ಕಾರಣಕ್ಕೆ ಹೊಳೆಯ ಗುಂಡಿಗಳಲ್ಲಿ ದಾರಾಳ ಮೀನುಗಳು ಇದೆ. ಯಾವುದೇ ಕಾರಣಕ್ಕೂ ವಿಷ ಹಾಕಿ ಮಿನು ಹಿಡಿಯಬಾರದು ಅದರಿಂದ ಮೀನುಗಳ ಸಂತಾನ ನಾಶವಾಗುತ್ತದೆ. ಬೇಸಿಗೆಯಲ್ಲಿ ಮೀನು ಹಿಡಿಯುವುದೇ ಒಂದು ಮಜಾ ಎನ್ನುತ್ತಾರೆ ಸಾದಿಕ್.

Leave a Reply

Your email address will not be published. Required fields are marked *

error: Content is protected !!