ಕರಾವಳಿರಾಜಕೀಯ

ಸುಳ್ಯ: ಕಾಂಗ್ರೆಸ್ ಅಭ್ಯರ್ಥಿ ಬದಲಾಯಿಸಲು ಒತ್ತಾಯಿಸಿ ಶುರುವಾಯಿತು ರಾಜೀನಾಮೆ ಪರ್ವ



ಪುತ್ತೂರು: ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಚ್.ಎಂ. ನಂದಕುಮಾರ್ ಅವರಿಗೇ ಟಿಕೆಟ್ ನೀಡದೇ ಇರುವುದಕ್ಕೆ ಅಸಮಾಧಾನಗೊಂಡ ಕಾರ್ಯಕರ್ತರು ರಾಜೀನಾಮೆ ನೀಡಲು ಪ್ರಾರಂಭಿಸಿದ್ದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಕೆಲವರ ರಾಜೀನಾಮೆ ಪತ್ರ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಕಳೆದ ನಾಲೈದು ವರ್ಷಗಳಿಂದ ತಾಲೂಕಿನಾದ್ಯಂತ ಸಂಚರಿಸಿ ಬೂತ್‌ ಮಟ್ಟದಿಂದಲೇ ಕಾರ್ಯಕರ್ತರನ್ನು ಸಂಘಟಿಸಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ನಂದಕುಮಾರ್ ಅಭ್ಯರ್ಥಿಯಾದರೆ ಮಾತ್ರ 30ವರ್ಷಗಳ ನಂತರ ಕಾಂಗ್ರೆಸ್ ಜಯಭೇರಿ ಬಾರಿಸಬಲ್ಲದು ಎಂಬುದು ಮನೆಮಾತಾಗಿದೆ. ಹರಿಹರ ಪಳ್ಳತಡ್ಕದಂತಹ ಅನೇಕ ಗ್ರಾಮೀಣ ಪ್ರದೇಶದಲ್ಲಿ ಬೂತ್ ಬೂತ್ ತೆರಳಿ ಕಾರ್ಯಕರ್ತರನ್ನು ಸಿದ್ದಪಡಿಸಿ ಬೂತ್ ಮಟ್ಟದಲ್ಲಿ ಆರ್ಥಿಕವಾಗಿ ಹಿಂದುಳಿದಿದ್ದ ಮನೆಯ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಗಳಿಗೆ ಹಾಗೂ ಅನಾರೋಗ್ಯ ಪೀಡಿತ ಕುಟುಂಬಗಳಿಗೆ ಧನಸಹಾಯ ಮಾಡುತ್ತಾ ಪಕ್ಷದ ಕಾರ್ಯಕರ್ತರಿಗೆ ಅಭಿಮಾನ ಮೂಡಿಸಿದ್ದರು. ಅವರ ಸಮಾಜಮುಖಿ ಕಾರ್ಯಗಳಿಂದ ಪ್ರೇರಿತರಾಗಿ ನಾವು ಅಭಿಮಾನದಿಂದ ನಂದಕುಮಾರ್ ಅವರೇ ಈ ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂಬುದಾಗಿ ಕಳೆದ ವರ್ಷದಿಂದಲೇ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು ಅನೇಕ ಮತದಾರ ಅಭಿಮಾನಿಗಳನ್ನು ಸಂಪಾದಿಸಿದ್ದೆವು.

ಇದೀಗ ಏಕಾಏಕಿ ಕಾಂಗ್ರೆಸ್ ಹೈಕಮಾಂಡ್ ಕ್ಷೇತ್ರದ ಪರಿಚಯವಿಲ್ಲದ ಜಿ.ಕೃಷ್ಣಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿರುವುದರಿಂದ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಂದಕುಮಾರ್ ಅವರ ಗೆಲುವನ್ನು ಕನಸು ಕಾಣುತ್ತಿದ್ದ ನಮಗೆಲ್ಲ ಬರಸಿಡಿಲು ಬಡಿದಂತಾಗಿದೆ. ಕನಿಷ್ಠ ಪಕ್ಷ ಬ್ಲಾಕ್ ಕಾಂಗ್ರೆಸ್ ಬೂತ್ ಮಟ್ಟದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್ ಘೋಷಣೆ ಮಾಡಬೇಕಿತ್ತು. ಇದೀಗ ಕಾಂಗ್ರೆಸ್ ಘೋಷಣೆ ಮಾಡಿರುವ ಅಭ್ಯರ್ಥಿಯ ಸೋಲು ಖಚಿತವಾಗಿದ್ದು 30ವರ್ಷಗಳಿಂದ ಶಾಸಕರಿಲ್ಲದ ನಮ್ಮ ಗೋಳು ಕೇಳುವವರಿಲ್ಲದಂತಾಗಿದೆ.

ಕಾಂಗ್ರೆಸ್ ಹೈಕಮಾಂಡ್ ಶೀಘ್ರವೇ ಮಧ್ಯ ಪ್ರವೇಶಿಸಿ ಅಭ್ಯರ್ಥಿ ಆಯ್ಕೆಯ ಬಗ್ಗೆ ಮರುಪರಿಶೀಲನೆ ಮಾಡಿ ನಂದಕುಮಾರ್‌ ಅವರಿಗೆ ಬಿ ಫಾರಂ ನೀಡಬೇಕು. ಇಲ್ಲವೇ ನನ್ನಂತಹ ಅನೇಕಾರು ಗ್ರಾಮ ಸಮಿತಿ ಅಧ್ಯಕ್ಷರುಗಳು ಪದಾಧಿಕಾರಿಗಳು ಮಾತ್ರವಲ್ಲದೆ ಬೂತ್ ಲೆವೆಲ್ ಏಜೆಂಟ್ ಗಳು, ಕಾಂಗ್ರೆಸ್ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸುತ್ತಾ ಪಕ್ಷದ ಚಟುವಟಿಕೆಗಳಿಂದ ದೂರಸರಿಯುವುದಾಗಿ ನಿರ್ಧಾರ ಮಾಡಿರುತ್ತೇವೆ.

ನಮ್ಮಂತಹ ಬೂತ್ ಮಟ್ಟದ ಕಾರ್ಯಕರ್ತರ ಅಹವಾಲುಗಳಿಗೆ ತಮ್ಮ ಸ್ಪಂದನೆ ದೊರಕದೇ ಇದ್ದಲ್ಲಿ ನಮ್ಮ ಈ ರಾಜೀನಾಮೆ ಪತ್ರವನ್ನು ಅಂಗೀಕರಿಸಿ ಪಕ್ಷದ ಚಟುವಟಿಕೆಗಳಿಂದ ದೂರ ಸರಿಯಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಹರಿಹರ ಪಲ್ಲತ್ತಡ್ಕ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಉಜ್ವಲ್ ಕಚ್ಚೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಬರೆದಿದ್ದಾರೆ.

ಇದೇ ರೀತಿ ಇನ್ನೂ ಹಲವು ನಾಯಕರು ಮತ್ತು ಕಾರ್ಯಕರ್ತರು ತಮ್ಮ ರಾಜೀನಾಮೆಯನ್ನು ನೀಡಲು ಮುಂದಾಗಿದ್ದು ತಮ್ಮ ರಾಜೀನಾಮೆ ಪತ್ರವನ್ನು ಜಿಲ್ಲಾಧ್ಯಕ್ಷರಿಗೆ ತಲುಪಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು 100ರಷ್ಟು ಕಾರ್ಯಕರ್ತರು ರಾಜೀನಾಮೆ ನೀಡಲು ಸಿದ್ಧತೆ ನಡೆಸಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.

Leave a Reply

Your email address will not be published. Required fields are marked *

error: Content is protected !!