ಸುಳ್ಯ: ಶಾಲಾ ಕಾಲೇಜು ಪರಿಸರದಲ್ಲಿ ತಂಬಾಕು, ಗುಟ್ಕಾ ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ದಿಢೀರ್ ದಾಳಿ ನಡೆಸಿದ ಪೊಲೀಸರು
ಸುಳ್ಯ ಶಾಲಾ, ಕಾಲೇಜು ಸಮೀಪದ ಅಂಗಡಿಗಳಿಗೆ ಸುಳ್ಯ ಪೊಲೀಸರು ಮಾ.21ರಂದು ಬೆಳಿಗ್ಗೆ ದಿಡೀರ್ ದಾಳಿ ನಡೆಸಿ ಅಂಗಡಿಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ ತಂಬಾಕು ಮತ್ತು ಗುಟ್ಕಾ ಮಾರಾಟ ಮಾಡುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಇಲಾಖೆಯ ಸುತ್ತೋಲೆ ಪ್ರಕಾರ ಶಾಲೆ ಮತ್ತು ಕಾಲೇಜುಗಳ ಪರಿಸರದಲ್ಲಿ 500 ಮೀಟರ್ ಅಂತರದಲ್ಲಿ ಸಿಗರೇಟ್ ಮತ್ತು ಗುಟ್ಕಾ ಮಾರಾಟ ಮಾಡುವಂತಿಲ್ಲ. ಆದರೆ ಕೆಲವರು ನಿಯಮ ಉಲ್ಲಂಘಿಸಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಸುಳ್ಯ ನಗರದ ಜಯನಗರ, ಶಾಂತಿನಗರ,
ಕೆ.ವಿ.ಜಿ ಜಂಕ್ಷನ್, ಜ್ಯೋತಿ ಸರ್ಕಲ್, ಜಟ್ಟಿಪಳ್ಳ, ಗಾಂಧೀನಗರ ಸೇರಿದಂತೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳ ಕಡೆ ದಾಳಿ ನಡೆಸಲಾಗಿದೆ. ಕಾರ್ಯಾಚರಣೆಯಲ್ಲಿ ಹತ್ತಕ್ಕೂ ಅಧಿಕ ಅಂಗಡಿಗಳಲ್ಲಿ ತಂಬಾಕು ಉತ್ಪನ್ನ ಲಭಿಸಿದ್ದು, ಅವುಗಳನ್ನು ಪೊಲೀಸರು ವಶಪಡಿಸಿ ಪ್ರಕರಣ ದಾಖಲಿಸಿ ಅಂಗಡಿ ಮಾಲೀಕರಿಗೆ ದಂಡ ವಿಧಿಸಲಾಗಿದೆ.
ಹಿರಿಯ ಅಧಿಕಾರಿಗಳ ಸೂಚನೆಯಂತೆ ಸುಳ್ಯ ವೃತ್ತ ನಿರೀಕ್ಷಕ ರವೀಂದ್ರ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ದಿಲೀಪ್ ಕುಮಾರ್ ಹಾಗೂ ಸಿಬ್ಬಂದಿವರ್ಗ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.