ಮೊಸಳೆ…ಬಂತು ಮೊಸಳೆ… ವದಂತಿಗೆ ಐವರು ಮಹಿಳೆಯರು ನೀರು ಪಾಲು: ಇಬ್ಬರು ಬಾಲಕರು ನಾಪತ್ತೆ
ನದಿ ದಾಟುತ್ತಿದ್ದ ವೇಳೆ ಮೊಸಳೆ ಬಂತು ಮೊಸಳೆ ಎಂಬ ವದಂತಿಯಿಂದ ನದಿಯಲ್ಲಿ ಮುಳುಗಿ ಐವರು ಮಹಿಳೆಯರು ದಾರುಣ ಮೃತಪಟ್ಟು, ಇಬ್ಬರು ಬಾಲಕರು ನಾಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.

ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ 17 ಜನರ ತಂಡ ಸುಮಾರು 325 ಕಿ.ಮೀ ದೂರದಲ್ಲಿರುವ ರಾಜಸ್ತಾನದ ಕರೌಲಿ ಜಿಲ್ಲೆಯ ದೇವಸ್ಥಾನವೊಂದಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಈ ಭಕ್ತರು ಮೊರೆನಾ ಜಿಲ್ಲೆ ವರೆಗೆ ವಾಹನದಲ್ಲಿ ಬಂದಿದ್ದು ಅಲ್ಲಿಂದ ಪಾದಯಾತ್ರೆ ಮೂಲಕ ಚಂಬಲ್ ನದಿ ದಾಟಿ ಹೋಗುವಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
17 ಜನರು ಗುಂಪು ಗುಂಪಾಗಿ ನದಿ ದಾಟುತ್ತಿರುವ ವೇಳೆ ಗುಂಪಿನಲ್ಲಿದ್ದ ಯಾರೋ ಒಬ್ಬರು ಮೊಸಳೆ ಬಂತು ಮೊಸಳೆ ಎಂದು ಜೋರಾಗಿ ಕೂಗಿದ್ದು ಮಹಿಳೆಯರು, ಮಕ್ಕಳು ಭಯಭೀತಗೊಂಡು ದಿಕ್ಕಾಪಾಲಾಗಿ ಚದುರಿ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ವರದಿಯಾಗಿದೆ.
ನೀರಿನಲ್ಲಿ ಕಾಣೆಯಾಗಿದ್ದ ಐವರು ಮಹಿಳೆಯರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು ಇನ್ನಿಬ್ಬರು ಬಾಲಕರ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹತ್ತು ಜನರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.