ಸುಳ್ಯ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಧಿಡೀರ್ ದೆಹಲಿಗೆ ವಿಮಾನ ಹತ್ತಿದರೇ..?
ಸಾರ್ವಜನಿಕ ವಲಯದಲ್ಲಿ ಬಿಸಿ ಬಿಸಿ ಚರ್ಚೆ
ಕರ್ನಾಟಕ ವಿಧಾನಸಭಾ ಚುನಾವಣೆಗೆ ತಯಾರಿಗಳು ನಡೆಯುತ್ತಿದ್ದು ಪ್ರತಿಯೊಂದು ಪಕ್ಷದಲ್ಲಿ, ಕ್ಷೇತ್ರಗಳಲ್ಲಿ ಅಭ್ಯರ್ಥಿ ಸ್ಥಾನದ ಆಕಾಂಕ್ಷಿಗಳು ಟಿಕೆಟ್ ಪಡೆದುಕೊಳ್ಳುವ ಹುಮ್ಮಸ್ಸಿನಲ್ಲಿ ಓಡಾಡುತ್ತಿದ್ದಾರೆ. ಟಿಕೆಟ್ ಆಕಾಂಕ್ಷಿಗಳು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದು ಈಗಾಗಲೇ ಕೆಲವರ ಹೆಸರುಗಳು ಕೇಳಿ ಬಂದಿದ್ದು ಇನ್ನು ಕೆಲವರು ಸದ್ದಿಲ್ಲದೆ ಹೈಕಮಾಂಡ್ ಕದ ತಟ್ಟುವ ಪ್ರಯತ್ನದಲ್ಲಿದ್ದಾರೆ.
ಸುಳ್ಯ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದರೂ 2 ಹೆಸರುಗಳು ಪ್ರಮುಖವಾಗಿ ಕೇಳಿ ಬಂದಿದ್ದು ಇಬ್ಬರಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆ ಸಿಗಲಿದೆ ಎಂಬುವುದು ಕುತೂಹಲ ಮೂಡಿಸಿದೆ.
ಈತನ್ಮಧ್ಯೆ ಕಾಂಗ್ರೆಸ್ ಪಕ್ಷದ ಮುಖಂಡ ಕಡಬ ಕ್ಷೇತ್ರದ ವೀಕ್ಷಕ ಜಿ. ಕೃಷ್ಣಪ್ಪ, ಕೆಪಿಸಿಸಿ ಸಂಯೋಜಕ ಹೆಚ್.ಎಂ ನಂದಕುಮಾರ್ ರವರ ಹೆಸರು ಮುಂಚೂಣಿಯಲ್ಲಿ ಕೇಳಿ ಬಂದಿದೆ.
ಈ ಬಾರಿ ಸುಳ್ಯದಿಂದ ನಾನೇ ಸ್ವರ್ದಿಸಲಿದ್ದೇನೆ ಎಂದು ಜನರ ನಡುವೆ ಓಡಾಟ ಮಾಡುತ್ತಿರುವ ನಂದಕುಮಾರ್ ರವರಿಗೆ ಈ ಸಲ ಟಿಕೆಟ್ ಸಿಗಬಹುದು ಎಂದು ಹಲವು ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ಇದೆಲ್ಲದರ ನಡುವೆ ಜಿ. ಕೃಷ್ಣಪ್ಪರವರು ಸದ್ದಿಲ್ಲದೇ ಧಿಡೀರ್ ದೆಹಲಿಗೆ ವಿಮಾನ ಹತ್ತಿದ್ದಾರೆ ಎನ್ನುವ ಸುದ್ದಿ ಕ್ಷೇತ್ರದಲ್ಲಿ ಹರಿದಾಡಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಚುನಾವಣೆಗೆ ಇನ್ನೇನು ಕೆಲವು ದಿನಗಳಷ್ಟೆ ಬಾಕಿ ಉಳಿದಿದ್ದು ಅಭ್ಯರ್ಥಿಗಳ ಪಟ್ಟಿ ಕೂಡ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತದೆ ಎನ್ನುವುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.