ಕರಾವಳಿ

ಮುಳುಗುತಜ್ಞ ಈಶ್ವರ್ ಮಲ್ಪೆಯನ್ನು ಸನ್ಮಾನಿಸಿ 1 ಲಕ್ಷ ರೂ. ನೀಡಿದ ಪುತ್ತಿಲ ಪರಿವಾರ





ಖ್ಯಾತ ಮುಳುಗುತಜ್ಞ ಈಶ್ವರ್ ಮಲ್ಪೆಯವರಿಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ 1 ಲಕ್ಷದ ರೂ. ಚೆಕ್ ಅನ್ನು ಅರುಣ್ ಕುಮಾರ್ ಪುತ್ತಿಲ ಈಶ್ವರ್ ಮಲ್ಪೆ ಮತ್ತು ಗೀತಾ ದಂಪತಿಗಳಿಗೆ ಅವರ ಮಲ್ಪೆಯ ಮನೆಯಲ್ಲಿ ವಿತರಿಸಿದರು. ತುರ್ತು ಸಂದರ್ಭದಲ್ಲಿ ಜೀವದ ಹಂಗು ತೊರೆದು ನೂರಾರು ಜೀವಗಳನ್ನು ರಕ್ಷಿಸಿದ ಹಲವು ಕ್ಲಿಷ್ಟಕರ ಸಂದರ್ಭದಲ್ಲಿ ಜಲ ಅವಘಡದಲ್ಲಿ ಮೃತಪಟ್ಟ ಮೃತದೇಹಗಳನ್ನು ನೀರಿನಿಂದ ಮೇಲೆತ್ತಿರುವ ಈಶ್ವರ್ ಮಲ್ಪೆ ತಮ್ಮ ಮನೆಯ ಪರಿಸ್ಥಿತಿಯನ್ನು ಲೆಕ್ಕಿಸದೆ ಪ್ರಾಕೃತಿಕ ವಿಕೋಪದ ಕಠಿಣ ಸಂದರ್ಭದಲ್ಲಿ ಜೀವದ ಹಂಗು ತೊರೆದು ಉಚಿತವಾಗಿ ರಕ್ಷಣೆಗೆ ಧಾವಿಸುವ ವ್ಯಕ್ತಿಯಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶೀರೂರು ಗುಡ್ಡ ಕುಸಿತದ ರಕ್ಷಣಾ ಕಾರ್ಯದಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತದ ಮನವಿಯ ಮೇರೆಗೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ನಾಪತ್ತೆಯಾಗಿದ್ದ ಚಾಲಕ ಅರ್ಜುನ್ ಲಾರಿಯನ್ನು ಗುರುತಿಸುವಲ್ಲಿಯೂ ಈಶ್ವರ್ ಮಲ್ಪೆ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಕೊನೆಗೆ ಅವರನ್ನು ಅಧಿಕಾರಿಗಳು ಮತ್ತು ಸರ್ಕಾರ ಕಡೆಗಣನೆ ಮಾಡಿರುವುದು ಸಮಾಜದಲ್ಲಿ ತೀವ್ರ ಬೇಸರವನ್ನು ಉಂಟು ಮಾಡಿದೆ. ಮನೆಯಲ್ಲಿ ಬಡತನವಿದ್ದರೂ ಮಾನವೀಯತೆಯಲ್ಲಿ ಅಗರ್ಭ ಶ್ರೀಮಂತರಾಗಿರುವ ಈಶ್ವರ್ ಮಲ್ಪೆಯವರ ಸೇವೆ ಇನ್ನಷ್ಟು ಬೇಕೆಂಬ ಹಂಬಲದಿಂದ ಪ್ರತಿಯೊಬ್ಬನೂ ಈಶ್ವರ್ ಮಲ್ಪೆಯವರಿಗೆ ಬೆಂಬಲವಾಗಿ ನಿಲ್ಲಬೇಕೆಂದು ಈ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲ ಹೇಳಿದರು.

ಈ ಸಂದರ್ಭದಲ್ಲಿ ಉಡುಪಿ ಮೀನುಗಾರರ ಪ್ರಕೋಷ್ಠದ ಸಂಚಾಲಕರಾದ ಮಂಜು ಕೊಳ ಮಲ್ಪೆ, ಉಡುಪಿ ಹಿಂದೂ ಯುವಸೇನೆ ನಗರ ಅಧ್ಯಕ್ಷರಾದ ಸುನೀಲ್ ನೇಜಾರು, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಂದಾರು, ಯುವ ಮೋರ್ಚಾ ಉಪಾಧ್ಯಕ್ಷ ಧನುಶ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!