ಕರಾವಳಿರಾಜಕೀಯ

ಸುಳ್ಯ-ಕೊಡಿಯಾಲಬೈಲ್-ದುಗ್ಗಲಡ್ಕ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಉರಿ ಬಿಸಿಲು ಲೆಕ್ಕಿಸದೆ ನಗರದಲ್ಲಿ ಪ್ರತಿಭಟನೆ ನಡೆಸಿ ನಿಧಿ ಸಂಗ್ರಹ




ಸುಳ್ಯ:ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಊರಿನ ಜನತೆ ಸುಡು ಬಿಸಿಲನ್ನು ಲೆಕ್ಕಿಸದೆ ಸುಳ್ಯ ಬೀದಿಗಳಲ್ಲಿ ರಸ್ತೆ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹ ಎಂಬ ವಿನೂತನ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ ಘಟನೆ ಮಾ.14 ಸುಳ್ಯದಲ್ಲಿ ನಡೆದಿದೆ.



ನೂರಾರು ಮಂದಿ ಸ್ಥಳೀಯ ಜನತೆ ಸುಳ್ಯ ನಗರ ಪಂಚಾಯತ್ ಎದುರಿನಲ್ಲಿ ನಿಧಿ ಸಂಗ್ರಹ ಅಭಿಯಾನ ನಡೆಸುವ ಮೂಲಕ ತಮ್ಮ ಬೇಡಿಕೆಯನ್ನು ವ್ಯಕ್ತಪಡಿಸಿದರು.


ಕಳೆದ ಹಲವಾರು ತಿಂಗಳುಗಳಿಂದ ರಸ್ತೆ ಅಭಿವೃದ್ಧಿಗೆ ಹೋರಾಟ ನಡೆಸುತ್ತಿರುವ ಆ ಭಾಗದ ನಾಗರಿಕ ಹೋರಾಟ ಸಮಿತಿಯ ನೇತೃತ್ವದಲ್ಲಿ ಸುಳ್ಯ ನಗರದ ಜಟ್ಟಿಪಳ್ಳ ಕ್ರಾಸ್ ಬಳಿ ಜಮಾಯಿಸಿದ ಸಾರ್ವಜನಿಕರು ಜಾಥಾ ಮೂಲಕ ಆಗಮಿಸಿ ನಗರ ಪಂಚಾಯತ್ ಮುಂಭಾಗದಲ್ಲಿ ಜಮಾಯಿಸಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮುಖಂಡರುಗಳು ಮಾತನಾಡುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.


ಸುಳ್ಯ ಕ್ಷೇತ್ರಕ್ಕೆ ಕೇವಲ ಆನೆಗಳು ಮಾತ್ರ ಬರುವುದು ಯೋಜನೆಗಳು ಬರುತ್ತಿಲ್ಲ ಎಂದು ಲೇವಡಿ ಮಾಡಿದರು.



ಸುಳ್ಯ -ಕೊಡಿಯಾಲಬೈಲ್ -ದುಗ್ಗಲಡ್ಕ ಏಳು ಕಿಲೋಮೀಟರ್ ಉದ್ದವಿರುವ ರಸ್ತೆ ಬೆಳೆಯುತ್ತಿರುವ ಸುಳ್ಯಕ್ಕೆ ಅತ್ಯಂತ ಅವಶ್ಯಕವಾದ ರಸ್ತೆ ಯಾಗಿದೆ. ಈ ರಸ್ತೆಯ ಅಭಿವೃದ್ಧಿಗೆ 25 ವರ್ಷಗಳಿಂದ ಬೇಡಿಕೆ ಇದೆ. ಆದರೆ ಜನಪ್ರತಿನಿಧಿಗಳು, ಸರಕಾರ ನೀಡಿದ ಭರವಸೆಗಳು ಸುಳ್ಳಾಗಿದೆ. ಈ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು. ಬಳಿಕ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಸಾರ್ವಜನಿಕರಿಂದ ಸಂಗ್ರಹಿಸಿದ ಹಣದಿಂದ ರಸ್ತೆ ದುರಸ್ತಿ‌ ಮಾಡಲಾಗುವುದು ಎಂದು ಪ್ರಮುಖರು ತಿಳಿಸಿದರು.




ಪ್ರತಿಭಟನೆಯಲ್ಲಿ ಉದ್ಯಮಿ ಸುರೇಶ್ಚಂದ್ರ ಕಮಿಲ,ಚಾರ್ಡರ್ಡ್ ಅಕೌಂಟೆಂಟ್ ಪಿ.ಗಣೇಶ್ ಭಟ್,ಸೀತಾನಂದ ಬೇರ್ಪಡ್ಕ, ದಿನೇಶ್ ಮಡಪ್ಪಾಡಿ, ಬಾಲಕೃಷ್ಣನ್ ನಾಯರ್,
ಸುರೇಶ್ ಎಂ.ಎಚ್. ಮೊದಲಾದವರು ಈ ಸಂದರ್ಭದಲ್ಲಿ ತಮ್ಮ ತಮ್ಮ ಅನಿಸಿಕೆಗಳನ್ನು ಮಾತನಾಡಿದರು.



ಪ್ರಮುಖರಾದ ಡಾ.ಗಣೇಶ್ ಭಟ್, ಡಾ.ರಘುರಾಮ, ನಟರಾಜ ಶರ್ಮ, ಕುಶ ನೀರಬಿದಿರೆ, ಉಬರಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಿತ್ರಾ ಕುಮಾರಿ, ಮನೋಜ್ ಪಾನತ್ತಿಲ, ರಾಧಾಕೃಷ್ಣ ಬೇರ್ಪಡ್ಕ, ಗಿರೀಶ್ ಪಾಲಡ್ಕ, ಖಲಂದರ್ ಎಲಿಮಲೆ, ಜಯಪ್ರಕಾಶ್ ಕೊಡಿಯಾಲಬೈಲು, ಶಿವರಾಮ ಎಂ.ಪಿ, ಡಾ.ಅಶೋಕ್, ಶಂಬಯ್ಯ ಪಾರೆ, ಮಧುಕಿರಣ್, ಭವಾನಿಶಂಕರ ಕಲ್ಮಡ್ಕ, ಶಿಹಾಬ್ ಜಟ್ಟಿಪಳ್ಳ, ಬಾಲಚಂದ್ರ, ಮೋಹನ್ ಬೇರ್ಪಡ್ಕ ಮತ್ತಿತರರು ಉಪಸ್ಥಿತರಿದ್ದರು.



ಕೇಸರಿ- ಹಸಿರು ಸಾಲು ಹಾಕಿ ಪ್ರತಿಭಟನೆ
ಪ್ರತಿಭಟನೆಯಲ್ಲಿ ಭಾಗವಹಿಸಿದ ಬಹುತೇಕ ಮಂದಿ ಕೇಸರಿ ಶಾಲು ಹಾಕಿ ಆಗಮಿಸಿದ್ದರೆ, ಕೆಲವರು ಹಸಿರು ಶಾಲು ಹಾಕಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಮಹಿಳೆಯರೂ ಸೇರಿ ಸುಡು ಬಿಸಿಲನ್ನೂ ಲೆಕ್ಕಿಸದೇ 250 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!