ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಮಾಹಿತಿ ಪತ್ರಿಕೆ ಬಿಡುಗಡೆ
ಪುತ್ತೂರು: ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಮುಂದಿನ ಶೈಕ್ಷಣಿಕ ವರ್ಷದ ಶೈಕ್ಷಣಿಕ ಮಾಹಿತಿ ಪತ್ರಿಕೆಯನ್ನು ಸಂಸ್ಥೆಯ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಯಿತು.

ಇಲ್ಲಿ ಎಲ್ ಕೆ.ಜಿ ಯಿಂದ ಎಸ್.ಎಸ್.ಎಲ್.ಸಿ ವರೆಗೆ ಇಂಗ್ಲೀಷ್ ಮೀಡಿಯಂ ಸ್ಕೂಲ್, ಕನ್ನಡ ಮಾಧ್ಯಮ ಪ್ರೌಢಶಾಲೆ, ದಾರುಲ್ ಫಲಾಹ್ ಮದ್ರಸ,ಅಸ್ವಾಲಿಹಾ ಮಹಿಳಾ ಶರೀಅತ್ ಮತ್ತು ಪಿ.ಯು.ಕಾಲೇಜ್ ಹೀಗೆ ಹಲವಾರು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಬಗ್ಗೆ ಮಾಹಿತಿ ನೀಡಲಾಯಿತು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಪಡೀಲ್ ಅವರು ಈ ಸಂಸ್ಥೆಯಲ್ಲಿ ಕಲಿತ ಹಲವು ವಿದ್ಯಾರ್ಥಿಗಳಿಂದು ಉನ್ನತ ಸ್ಥಾನಕ್ಕೇರಿದ್ದಾರೆ, ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಇಂಗ್ಲೀಷ್ ಮತ್ತು ಕನ್ನಡ ಮಾಧ್ಯಮದಲ್ಲಿ ಶೇ.100 ಫಲಿತಾಂಶ ಬಂದಿದೆ. ಅದೇ ರೀತಿ ಎಂಟು ವರ್ಷಗಳ ಹಿಂದೆ ಸ್ಥಾಪಿಸಲಾದ ಅಸ್ವಾಲಿಹಾ ಮಹಿಳಾ ಶರೀಅತ್, ಪಿ.ಯು ಕಾಲೇಜ್ ಶೈಕ್ಷಣಿಕವಾಗಿ ಉತ್ತಮ ಸಾಧನೆಗಳನ್ನು ಮಾಡಿದ್ದು, ಪಿಯುಸಿಯಲ್ಲಿ ಸತತ ಶೇ.100 ಫಲಿತಾಂಶ ಪಡೆದು ಮೀಫ್ ಅವಾರ್ಡ್ ಪಡೆದಿದೆ. ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿನಿಯರಿಗೆ ಅಸ್ವಾಲಿಹಾ ಕೋರ್ಸ್ ನ ಜೊತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಎಸ್ಸೆಸ್ಸೆಲ್ಸಿ ನಂತರದ ಎರಡು ವರ್ಷಗಳ ಫಾಳಿಲಾ ಕೋರ್ಸನ್ನು ಆರಂಭಿಸಲಾಗಿದೆ. ಅದೇರೀತಿ ಹಿಂದಿನಂತೆ ಮುಂದೆಯೂ ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಕಾಲೇಜ್ ಶುಲ್ಕದಲ್ಲಿ ವಿಶೇಷ ರಿಯಾಯಿತಿ ನೀಡಲಾಗುವುದು, ಮೊದಲಿಗೆ ದಾಖಲಾತಿ ಪಡೆಯುವ ವಿದ್ಯಾರ್ಥಿನಿಯರಿಗೆ ಈ ರಿಯಾಯಿತಿಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು. ವಿದ್ಯಾರ್ಥಿನಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಅಸ್ವಾಲಿಹಾ ವುಮೆನ್ಸ್ ಕಾಲೇಜ್ ಸಂಚಾಲಕ ಹಾಜಿ ಅಬ್ದುಲ್ ರಹಿಮಾನ್ ಅಝಾದ್ ಮತ್ತು ಮುಖ್ಯಸ್ಥ ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ ಅವರು ಅಸ್ವಾಲಿಹಾ ಮತ್ತು ಫಾಳಿಲಾ ಶರೀಅತ್ ಕೋರ್ಸ್ ಬಗ್ಗೆ ಮಾಹಿತಿ ನೀಡಿದರು.
ಮೌಂಟನ್ ವ್ಯೂ ಆಂಗ್ಲ ಮಾಧ್ಯಮ ಶಾಲಾ ಮುಖ್ಯಸ್ಥೆ ಝುಲೈಖಾಬಿ ಅವರು ಎಲ್.ಕೆ.ಜಿ. ಮತ್ತು ಯು.ಕೆ.ಜಿ ತರಗತಿಗಳ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ ಎಂದರು. ಸಾಲ್ಮರ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಸ್ಥೆ ಮೋಹನಾಂಗಿ ಅವರು ಶೈಕ್ಷಣಿಕ ಮಾಹಿತಿ ನೀಡಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಅಶ್ರಫ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.