ಪುತ್ತೂರು ತಾ.ಪಂ ಕಚೇರಿಯಲ್ಲಿ ಭಾರೀ ಗೋಲ್‌ಮಾಲ್: ಸಿಬ್ಬಂದಿ ವಿರುದ್ದ 420 ಕೇಸ್
ಪುತ್ತೂರು: ಪುತ್ತೂರು ತಾಲೂಕು ಪಂಚಾಯತ್ ಕಚೇರಿಯಲ್ಲಿ ಭಾರೀ ಗೋಲ್‌ಮಾಲ್ ನಡೆದಿದ್ದು ಕಚೇರಿಯ ಲೆಟರ್ ಹೆಡ್ ಮತ್ತು ಸೀಲ್ ಹೊರಗಿನ ವ್ಯಕ್ತಿಗಳ ಕೈ ಸೇರಿದ್ದು ಇದರಿಂದ ಇಲಾಖೆಯ ಮಾನ ಸಾರ್ವಜನಿಕವಾಗಿ ಹರಾಜಾಗಿದ್ದು ಪ್ರಕರಣದ ಮುಖ್ಯ ಸೂತ್ರದಾರ ಸಿಬಂದಿಯೋರ್ವನ ವಿರುದ್ದ ಪೊಲೀಸ್ ದೂರು ದಾಖಲಾಗಿದೆ.
ಕಚೇರಿಯಲ್ಲಿ ಕಳೆದ ಹಲವು ವರ್ಷಗಳಿಂದ ತಾತ್ಕಾಲಿಕ ನೆಲೆಯಲ್ಲಿ ಬೆರಳಚ್ಚುಗಾರರಾಗಿ ಕೆಲಸ ಮಾಡುತ್ತಿದ್ದ ಶಿವಾನಂದ ಎಂಬಾತನೇ ಪ್ರಕರಣದ ಪ್ರಮುಖ ಆರೋಪಿ. ಈತನ ವಿರುದ್ದ ಪುತ್ತೂರು ನಗರ ಠಾಣೆಯಲ್ಲಿ 420 ಕೇಸು ದಾಖಲಾಗಿದೆ.
ಕಚೇರಿಯ ಮುಖ್ಯಸ್ಥರಿಗೆ ಗೊತ್ತಿಲ್ಲದ ರೀತಿಯಲ್ಲಿ ಕಚೇರಿಯ ಪತ್ರ ವ್ಯವಹಾರವನ್ನು ಮಾಡಲಾಗಿದ್ದು ಮಾತ್ರವಲ್ಲದೆ ಕಚೇರಿಯ ಲೆಟರ್ ಹೆಡ್ ಮತ್ತು ಸೀಲ್ ದುರ್ಬಳಕೆ ಮಾಡಲಾಗಿದೆ.
ತಾಲೂಕು ಪಂಚಾಯತ್ ಕಚೇರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರು ಶಿವಾನಂದನ ವಿರುದ್ದ ಪೊಲೀಸ್ ದೂರು ನೀಡಿದ್ದು ಕಚೇರಿಯ ಯಾವುದೇ ವ್ಯವಹಾರಗಳು ನನ್ನ ಗಮನಕ್ಕೆ ಬಂದೇ ಮಾಡಬೇಕಾಗುತ್ತದೆ ಆದರೆ ಸಿಬಂದಿ ಶಿವಾನಂದ ಎಂಬವರು ಕಚೇರಿಯ ಸರಕಾರಿ ದಾಖಲೆಗಳನ್ನು ಹೊರಗಿನ ವ್ಯಕ್ತಿಗಳಿಗೆ ನೀಡಿದ್ದು ಸರಕಾರಿ ಕರ್ತವ್ಯದ ಉಲ್ಲಂಘನೆ ಮತ್ತು ವಿಶ್ವಾಸ ದ್ರೋಹದ ಕೆಲಸವನ್ನು ಮಾಡಿದ್ದಾರೆ. ಕಚೇರಿಯ ಕಡತಗಳು, ಪ್ರಮುಖ ಪತ್ರ ವ್ಯವಹಾರವನ್ನು ಶಿವಾನಂದನೇ ಸ್ವಯಂ ಅಗಿ ಮಾಡಿದ್ದು ಮಾತ್ರವಲ್ಲದೆ ಹಲವು ಪತ್ರಗಳಿಗೆ ಆರೋಪಿಯೇ ಸಹಿಯನ್ನು ಹಾಕಿರುತ್ತಾರೆ ಈತನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾಗಿ ತಿಳಿಸಿದ್ದಾರೆ.
ಕಚೇರಿಯ ಕಡತಗಳು, ಪತ್ರಗಳು ಸಾರ್ವಜನಿಕರ ಕೈ ಸೇರಿರುವುದು ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದ್ದು ಇಲಾಖೆಯ ಮೇಲಿನ ವಿಶ್ವಾಸ ಜನ ಕಳೆದುಕೊಳ್ಳುವಂತೆ ಮಾಡಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.