ಸುಳ್ಯ: ಪ್ರಚೋದನಕಾರಿ ಬ್ಯಾನರ್ ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಗರ ಪಂಚಾಯತ್ ಸದಸ್ಯ ಕೆ ಎಸ್ ಉಮ್ಮರ್ ಆಗ್ರಹ
ಸುಳ್ಯ: ದೆಹಲಿಯಲ್ಲಿ ನಡೆದ ಕೊಲೆಯನ್ನು ಮುಂದಿಟ್ಟುಕೊಂಡು ಸಂಘ ಪರಿವಾರದ ಸಂಘಟನೆಗಳು ಪರೋಕ್ಷವಾಗಿ ಅಲ್ಪಸಂಖ್ಯಾತ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಸುಳ್ಯ ಪೇಟೆಯಲ್ಲಿ ಮತ್ತು ತಾಲೂಕಿನ ಹಲವೆಡೆ ಪ್ರಚೋದನಕಾರಿ ಬ್ಯಾನರ್ ಗಳನ್ನು ಅಳವಡಿಸಿರುವುದರ ಮೂಲಕ ಗಲಭೆ ನಡೆಸಲು ಷಡ್ಯಂತ್ರ ನಡೆಸುತ್ತಿರುವುದು ಖಂಡನೀಯ.
ಈ ಪ್ರಚೋದನಕಾರಿ ಬ್ಯಾನರ್ ಗಳನ್ನು ಹಾಕಿದವರ ಮೇಲೆ ಕಾನೂನು ಕ್ರಮ ಕೈಗೊಂಡು ಕೂಡಲೇ ತೆರವುಗೊಳಿಸು ವಂತೆ ಸುಳ್ಯ ಪೊಲೀಸ್ ಅಧಿಕಾರಿಗಳಲ್ಲಿ ವಿನಂತಿಸಿ ಕೊಳ್ಳುವುದಾಗಿ ಸುಳ್ಯ ನಗರ ಪಂಚಾಯತಿ ಸದಸ್ಯ ಕೆ ಎಸ್ ಉಮ್ಮರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಸ್ಲಿಂ ನಾಮಧಾರಿಯೊಬ್ಬ ನಡೆಸಿದ ಕೊಲೆಯನ್ನು ಯಾವುದೇ ಮುಸ್ಲಿಂ ಸಂಘಟನೆಗಳು ಅಥವಾ ವ್ಯಕ್ತಿಗಳಾಗಲಿ ಅದನ್ನು ಸಮರ್ಥಿಸಿಲ್ಲ. ಬದಲಿಗೆ ಘಟನೆಯನ್ನು ಖಂಡಿಸಿ ಆರೋಪಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ಘಟನೆಯ ನಂತರ ಕೂಡ ಅಂತಹದೇ ಪ್ರಕರಣಗಳು ಇತರ ಸಮುದಾಯದ ನಾಮಧಾರಿಗಳಿಂದ ನಡೆದಿದೆ. ಇಂತಹ ಪೈಶಾಚಿಕ ಕೃತ್ಯ ನಡೆಸುವವರಿಗೆ ಧರ್ಮವಿಲ್ಲ ಎಂಬ ಅರಿವಿದ್ದರೂ ಒಂದು ಸಮುದಾಯದ ವಿರುದ್ದ ದ್ವೇಷ ಸಾಧಿಸುವ ಮತ್ತು ಸಮಾಜದಲ್ಲಿ ಅಶಾಂತಿ ಹಬ್ಬಿಸುವ ಸಲುವಾಗಿ ಈ ರೀತಿಯ ಬ್ಯಾನರ್ ಗಳನ್ನು ಸಂಘ ಪರಿವಾರದವರು ಹಾಕುತ್ತಿದ್ದು ಅವರಿಗೆ ಹಿಂದೂ ಹೆಣ್ಣು ಮಕ್ಕಳ ಮೇಲೆ ಅಷ್ಟು ಕಾಳಜಿ ಇದ್ದರೆ ರಾಜ್ಯದಲ್ಲಿ ಮತ್ತು ದೇಶದಲ್ಲಿ ದಲಿತ ಮತ್ತು ಇತರ ಹಿಂದುಳಿದ ಹೆಣ್ಣು ಮಕ್ಕಳ ಮೇಲೆ ಕೆಲವು ಸಂಘ ಪರಿವಾರದ ಕಾರ್ಯಕರ್ತ ರಿಂದ ಮತ್ತು ವಿವಿಧ ಮಠಾಧಿಪತಿಗಳಿಂದ ಅತ್ಯಾಚಾರ ನಡೆದಾಗ ಒಂದು ಖಂಡನೆಯನ್ನು ವ್ಯಕ್ತಪಡಿಸದೆ ಮತ್ತು ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಯಾಕೆ ಮಾಡಿಲ್ಲ ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ಅವರು ಸವಾಲು ಹಾಕಿದ್ದರೆ.
ಹಿಂದೂ ಮುಸ್ಲಿಮರ ನಡುವೆ ಪರಸ್ಪರ ದ್ವೇಷ ಸಾಧಿಸುವ ಸಂಘ ಪರಿವಾರದ ಹಿಡನ್ ಅಜೆಂಡಾವನ್ನು ಅರಿತು ಅದನ್ನು ಬಹಿಷ್ಕರಿಸಿಜನತೆ ಶಾಂತಿ ಸೌಹಾರ್ದತೆ ಕಾಪಾಡಲು ಪರಸ್ಪರ ಕೈಜೋಡಿಸಬೇಕಾಗಿದೆ.
ಸುಳ್ಯ ಜಾತ್ರೆಯ ಸಂದರ್ಭ ಮುಸಲ್ಮಾನರಿಗೆ ವ್ಯಾಪಾರಕ್ಕೆ ಅನುಮತಿ ನೀಡಬಾರದಾಗಿ ಅಲ್ಲಲ್ಲಿ ಬ್ಯಾನರ್ ಕಂಡುಬರುತ್ತದೆ.
ಒಂದು ಹೊತ್ತಿನ ಊಟಕ್ಕೆ ಬೇಕಾಗಿ ಬೇರೆ ಬೇರೆ ಊರುಗಳಿಂದ ವ್ಯಾಪಾರಕ್ಕೆ ಬರುವ ವ್ಯಕ್ತಿಗಳಲ್ಲಿ ಜಾತಿ ಧರ್ಮಗಳನ್ನು ಮೀರಿ ಹಸಿವಿನ ಕಷ್ಟದವರಾಗಿರುತ್ತಾರೆ.
ಹಿಂದೆಂದೂ ಕಾಣದ ಬೇರೆ ಬೇರೆ ವಿಷಯಗಳನ್ನು ಇಟ್ಟುಕೊಂಡು ರಾಜಕೀಯ ಮಾಡುವ ಸಂಘ ಪರಿವಾರ ಇತರ ಜನರ ಮನಸ್ಸಿನಲ್ಲಿ ವಿಷ ಬೀಜವನ್ನು ಬಿತ್ತುತಿದೆ.
ಮುಂದಿನ ದಿನಗಳಲ್ಲಿ ಸಂಘ ಪರಿವಾರದ ಈ ಷಡ್ಯಂತ್ರವನ್ನು ಹಿಂದೂ-ಮುಸ್ಲಿಮರು ಒಟ್ಟಾಗಿ ನಿಂತು ಹಿಮ್ಮಟ್ಟಿಸಬೇಕಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.