ಕರಾವಳಿಕ್ರೈಂ

ಅಕ್ರಮ ಜಾನುವಾರು ಸಾಗಾಟ ಪ್ರಕರಣ: ಆರೋಪಿಯ ಮನೆ, ಕೊಟ್ಟಿಗೆ ಜಪ್ತಿ


ಬಂಟ್ವಾಳ: ಬಂಟ್ವಾಳ ಉಳಿ ಗ್ರಾಮದ ಮಣಿನಾಲ್ಕೂರು-ತೆಕ್ಕಾರು ರಸ್ತೆಯಲ್ಲಿ ಗೂಡ್ಸ್ ಆಟೊದಲ್ಲಿ ಪರವಾನಿಗೆ ಇಲ್ಲದೇ ಅಕ್ರಮವಾಗಿ ಜಾನುವಾರು ಸಾಗಾಟ ಮಾಡಿರುವ ಪ್ರಕರಣದಲ್ಲಿ ಜಾನುವಾರು ನೀಡಿದ ಆರೋಪಿಯ ಮನೆ ಮತ್ತು ಹಟ್ಟಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.


ಆರೋಪಿತ ಭೋಜ ಮೂಲ್ಯನ ಮನೆ ಹಾಗೂ ಅದಕ್ಕೆ ಹೊಂದಿಕೊಂಡಿರುವ ಹಟ್ಟಿ ಸೇರಿದಂತೆ ಆವರಣವನ್ನು ಕಾನೂನು ಪ್ರಕ್ರಿಯೆಯಂತೆ ಜಪ್ತಿ ಮಾಡಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.


ಪುಂಜಾಲಕಟ್ಟೆ ಠಾಣಾ ಪೊಲೀಸರು ಡಿ.13ರಂದು ಗೂಡ್ಸ್ ಆಟೋವನ್ನು ತಡೆದು ಪರಿಶೀಲಿಸಿದಾಗ, ಒಂದು ಜಾನುವಾರನ್ನು ಹಿಂಸಾತ್ಮಕವಾಗಿ ಕಟ್ಟಿ ಹಾಕಿರುವುದು ಕಂಡು ಬಂದಿತ್ತು. ಈ ಬಗ್ಗೆ ಚಾಲಕನನ್ನು ವಿಚಾರಿಸಿದಾಗ, ಆತ ಬಂಟ್ವಾಳ ಮಣಿನಾಲ್ಕೂರು ಗ್ರಾಮದ ನಿವಾಸಿ ಶ್ರೀಧರ ಪೂಜಾರಿ (56) ಎಂಬುದಾಗಿ ತಿಳಿಸಿದ್ದು, ಬಂಟ್ವಾಳ ಸರಪಾಡಿ ಎಂಬಲ್ಲಿನ ಭೋಜ ಮೂಲ್ಯ ಎಂಬವರ ಮನೆಯಿಂದ ಮಾಂಸ ಮಾಡುವ ಉದ್ದೇಶದಿಂದ ಜಾನುವಾರನ್ನು ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜಾನುವಾರು, ಆಟೊ ಹಾಗೂ ಒಂದು ಮೊಬೈಲ್ ಫೋನ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!