ದೈವಸ್ಥಾನದ ಬಾಗಿಲು ಒಡೆಯಲು ಯತ್ನಿಸಿದ ಕಳ್ಳ ಪೊಲೀಸ್ ವಶಕ್ಕೆ
ಕಡಬ: ದೈವಸ್ಥಾನದ ಬಾಗಿಲು ಒಡೆದು ಕಳ್ಳತನಕ್ಕೆ ಯತ್ನಿಸಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಕಡಬ ತಾಲೂಕಿನ ಆಲಂಕಾರು ಎಂಬಲ್ಲಿ ಜೂ.10ರಂದು ವರದಿಯಾಗಿದೆ.

ಎಸ್ ಡಿ ಕೀರ್ತಿ ಎಂಬವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್ ಡಿ ಕೀರ್ತಿ ಅವರು ಗ್ರಾಮದ ದೈವಸ್ಥಾನವೊಂದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದು ಅವರು ಜೂ.10ರಂದು ರಾತ್ರಿ ದೈವಸ್ಥಾನದ ಬಳಿ ಹೋದಾಗ ಅಲ್ಲಿ ಓರ್ವ ವ್ಯಕ್ತಿ ದೈವಸ್ಥಾನದ ಬಾಗಿಲು ಬೀಗವನ್ನು ಒಡೆಯ ಪ್ರಯತ್ನಿಸುತ್ತಿದ್ದುದು ಕಂಡು ಬಂದಿದೆ. ಈ ವೇಳೆ ಕೀರ್ತಿ ಅವರು ಕೂಡಲೇ ತನ್ನ ಪರಿಚಿತರೊಬ್ಬರಿಗೆ ಕರೆ ಮಾಡಿ ದೈವಸ್ಥಾನದ ಬಳಿ ಬರುವಂತೆ ತಿಳಿಸಿದ್ದಾರೆ. ಅವರು ಬಂದ ಕೂಡಲೇ ಬಾಗಿಲು ಒಡೆಯಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಹಿಡಿದು ವಿಚಾರಿಸಿದಾಗ ತನ್ನ ಹೆಸರು ಹನುಮಂತರಾಯ ಯಾನೆ ಗೌಡನಗೌಡ ಎಂಬುದಾಗಿ ತಿಳಿಸಿದ್ದು, ಆತನು ದೈವಸ್ಥಾನದಲ್ಲಿ ಬೆಲೆಬಾಳುವ ವಸ್ತುಗಳಿರಬಹುದೆಂದು ಬಾಗಿಲನ್ನು ಒಡೆಯಲು ಪ್ರಯತ್ನಿಸಿರುವುದಾಗಿ ಒಪ್ಪಿಕೊಂಡಿದ್ದಾನೆ.
ಬಳಿಕ ಆರೋಪಿಯನ್ನು ಠಾಣೆಗೆ ಕರೆತಂದು ದೂರು ನೀಡಿದ್ದು ಈ ಬಗ್ಗೆ ಕಡಬ ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.