ಸುಳ್ಯ: ವರ್ಗ ಜಾಗದಲ್ಲಿ ಕೆಂಪುಕಲ್ಲು ಗಣಿಗಾರಿಕೆಗೆ ತೊಂದರೆ ನೀಡಬೇಡಿ: ತಹಶೀಲ್ದಾರ್ ರಿಗೆ ಕೆಂಪುಕಲ್ಲು ಕೋರೆ ಮಾಲಕರ ಸಂಘದ ಮನವಿ
ಸುಳ್ಯ: ವರ್ಗ ಜಾಗದಲ್ಲಿ ಕೆಂಪುಕಲ್ಲು ಗಣಿಗಾರಿಕೆ ಮಾಡುವ ಸಂದರ್ಭ ಕೆಂಪುಕಲ್ಲು ಸಾಗಾಣಿಕೆಗೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದು ಇದನ್ನು ತಡೆಯುವಂತೆ ಆಗ್ರಹಿಸಿ ಕೆಂಪುಕಲ್ಲು ಕೋರೆ ಮತ್ತು ಲಾರಿ ಚಾಲಕರ ಮಾಲಕರ ಮತ್ತು ಕಾರ್ಮಿಕರ ಸಂಘ ಸುಳ್ಯ ಇದರ ವತಿಯಿಂದ ತಹಶೀಲ್ದಾರ್ ರಿಗೆ ಮನವಿ ಸಲ್ಲಿಸಲಾಗಿದೆ.
ಡಿ.19 ರಂದು ಬೆಳಗ್ಗೆ ಸುಳ್ಯದ ಎಪಿಎಂಸಿ ಯಲ್ಲಿ ಸಭೆ ನಡೆಸಿ ಚರ್ಚಿಸಿದ ಕೆಂಪು ಕಲ್ಲು ಕೋರೆ ಮಾಲಕರು ಮತ್ತು ಕಾರ್ಮಿಕರು ಅಲ್ಲಿಂದ ಕಾಲ್ನಡಿಗೆಯ ಮೂಲಕ ತಾಲೂಕು ಕಚೇರಿಗೆ ಬಂದು ಮನವಿ ಸಲ್ಲಿಸಿದರು.
ಗ್ರೇಡ್ ಟು ತಹಶೀಲ್ದಾರ್ ಮಂಜುನಾಥ್ ಮನವಿ ಸ್ವೀಕರಿಸಿದರು.
ಸುಳ್ಯ ತಾಲೂಕಿನ ಎಲ್ಲಾ ಸರಕಾರಿ ಕಟ್ಟಡ ದೇವಸ್ಥಾನ, ಚರ್ಚ್, ಮಸೀದಿ ಮತ್ತು ಮನೆ ಹಾಗೂ ಇನ್ನಿತರ ಎಲ್ಲಾ ಕಟ್ಟಡಗಳಿಗೆ ಕೆಂಪುಕಲ್ಲನ್ನು ಉಪಯೋಗಿಸುತ್ತಾರೆ. ಹಾಗಾಗಿ ಹೆಚ್ಚಿನ ಕಾರ್ಮಿಕರು ಇದನ್ನು ವೃತ್ತಿಜೀವನವನ್ನಾಗಿ ಮಾಡಿಕೊಂಡು ಬಂದಿದ್ದಾರೆ. ಇದನ್ನು ನಂಬಿಕೊಂಡು ಹೆಚ್ಚು ಕಡಿಮೆ 500 ಕುಟುಂಬಗಳು, 5000 ಜನರು ಬದುಕುತ್ತಿದ್ದಾರೆ. ಅಲ್ಲದೆ ಇದನ್ನು ನಂಬಿ ಫೈನಾನ್ಸ್, ಸೊಸೈಟಿ, ಬ್ಯಾಂಕ್ ಹಾಗೂ ಇತರ ಆರ್ಥಿಕ ಸಂಘ ಸಂಸ್ಥೆಗಳಿಂದ ಸಾಲ ಪಡೆದು ಸುಮಾರು 150- 200 ಲಾರಿಗಳು ಈ ಉದ್ಯಮವನ್ನು ನಡೆಸುತ್ತಿದ್ದಾರೆ.
ಆದರೆ ವರ್ಗ ಜಾಗದಲ್ಲಿ ಕೆಂಪುಕಲ್ಲು ಗಣಿಗಾರಿಕೆ ಮಾಡುವುದರಿಂದ ಕೆಂಪುಕಲ್ಲು ಸಾಗಾಣಿಕೆಗೆ ಅಧಿಕಾರಿಗಳು ತೊಂದರೆ ಕೊಟ್ಟು ದಂಡ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಲಾರಿ ಚಾಲಕ ಮತ್ತು ಮಾಲಕರು ಬೇಸತ್ತಿದ್ದಾರೆ. ಇನ್ನು ಮುಂದೆ ಅಧಿಕಾರಿಗಳು ಕೆಂಪುಕಲ್ಲು ಗಣಿಗಾರಿಕೆಗೆ ಮತ್ತು ಕೆಂಪುಕಲ್ಲು ಸಾಗಾಣಿಕೆಗೆ ಯಾವುದೇ ತೊಂದರೆ ಮಾಡದಂತೆ ನಿರ್ದೇಶಿಸಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ. ಇದು ಸ್ಥಳೀಯವಾಗಿ ಸಾಗಾಟವಾಗುತ್ತದೆ. ಅಲ್ಲದೆ ಕೆಂಪುಕಲ್ಲು ಇಲ್ಲಿನ ಮೂಲಭೂತ ಕಚ್ಛಾವಸ್ತುವಾಗಿದ್ದು, ಇದಕ್ಕೆ ಕಠಿಣ ಕ್ರಮವನ್ನು ಕೈಗೊಂಡರೆ ಕಟ್ಟಡ ಕಾರ್ಮಿಕರು, ಸೆಂಟ್ರಿಂಗ್ , ಪ್ಲಂಬರ್, ಇಲೆಕ್ಟ್ರೀಷಿಯನ್, ಸಾರಣೆ ಕೆಲಸದವರು, ಇಂಜಿನಿಯರ್ ಅಸೋಸಿಯೇಷನ್ ಮತ್ತು ಕಾರ್ಮಿಕರು ನಿರುದ್ಯೋಗಿಗಳಾಗುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ತಾವುಗಳು ನಮ್ಮನ್ನೆಲ್ಲಾ ನಿರುದ್ಯೋಗಿಗಳನ್ನಾಗಿ ಮಾಡದೇ ರಕ್ಣಿಸಿಕೊಡುವಂತೆ ಅವರು ಮನವಿಯಲ್ಲಿ ವಿನಂತಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಕೆಂಪು ಕಲ್ಲು ಕೋರೆ ಮತ್ತು ಲಾರಿ ಚಾಲಕರ ಮಾಲಕರ ಮತ್ತು ಕಾರ್ಮಿಕರ ಸಂಘದ ಭರತ್ ಕುಮಾರ್ ರೈ, ಪ್ರಮುಖರಾದ ಎನ್.ಎ. ರಾಮಚಂದ್ರ, ಹರೀಶ್ ರೈ ಜಯಪ್ರಕಾಶ್ ಕುಂಚಡ್ಕ , ನವೀನ್ ರೈ ಮೇನಾಲ,
ಪ್ರಮೋದ್ ಕುಮಾರ್ ಮೇನಾಲ, ಪ್ರಬೋದ್ ಶೆಟ್ಟಿ, ವಿನಯ ಆಳ್ವ, ಶ್ರವೀಣ್ ರೈ ಮೇನಾಲ, ಹೇಮಚಂದ್ರ ಪುತ್ತೂರು, ಸುನಿಲ್ ಮೇನಾಲ, ತೀರ್ಥೆಶ್ ಪಾರೆಪ್ಪಾಡಿ, ಶರೀಫ್ ಮೇನಾಲ, ಇಲ್ಯಾಸ್ ತೋಟ, ಕಿಟ್ಟಣ್ಣ ರೈ ಮೇನಾಲ, ತೀರ್ಥಪ್ರಸಾದ್ ಅಡ್ಕಾರ್, ಪ್ರಕಾಶ ಅಡ್ಕಾರ್, ದಾಮೋದರ ಶ್ರೀಕಟೀಲ್, ರಫೀಕ್ ಪುತ್ತೂರು, ಧನ್ಯಕುಮಾರ್ ಪುತ್ತೂರು, ಅಜಿತ್ ಕುಮಾರ್ ಮಿಂಚುಪದವು, ಇಬ್ರಾಹಿಂ ಮಂಡೆಕೋಲು, ಶಾಫಿ ಮಡಿಕೇರಿ, ಸಿರಾಜ್, ಖಾದರ್ ನೆಲ್ಯಡ್ಕ ಮೊದಲಾದವರಿದ್ದರು.