ರುಂಡವಿಲ್ಲದ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆ
ರುಂಡವಿಲ್ಲದ ಬಾಲಕನ ಶವವೊಂದು ಮೀರತ್ನಲ್ಲಿ ಪತ್ತೆಯಾಗಿದ್ದು, ಇದು ನರ ಬಲಿ ಆಗಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಇಂಚೋರಿ ಪೊಲೀಸ್ ಠಾಣಾ ವ್ಯಾಪ್ತಿಯ ನಂಗ್ಲಿಶಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಬಾಲಕನನ್ನು ನವೆಂಬರ್ 30 ರಂದು ಪ್ರೀತ್ ವಿಹಾರ್‌ನಲ್ಲಿರುವ ನಿವಾಸದಿಂದ ಅಪಹರಿಸಲಾಗಿದೆ ಎನ್ನಲಾಗಿದ್ದು ಬಳಿಕ ಹತ್ಯೆ ಮಾಡಲಾಗಿದೆ. ಮೀರತ್ನ ಹೊಲವೊಂದರಲ್ಲಿ ರುಂಡ ಇಲ್ಲದ ಶವ ಪತ್ತೆಯಾಗಿತ್ತು ಸಾವಿಗೆ ನರಬಲಿಯೇ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ. ಪೊಲೀಸ್ ತಂಡವನ್ನು ಜಗತ್ಪುರಿ ನಿವಾಸಕ್ಕೆ ಕಳುಹಿಸಲಾಗಿದೆ ಮತ್ತು ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ನಿರಂತರ ವಿಚಾರಣೆಯ ಬಳಿಕ ಆರೋಪಿಯು ಮೀರತ್‌ನ ಕಬ್ಬಿನ ಗದ್ದೆಯಲ್ಲಿ ಮಗುವನ್ನು ಎಸೆದಿರುವುದನ್ನು ಒಪ್ಪಿಕೊಂಡಿದ್ದಾನೆ. ಸ್ಥಳೀಯ ಪೊಲೀಸರು ಈಗಾಗಲೇ ತಲೆ ಮತ್ತು ಕೈಕಾಲು ಇಲ್ಲದ ದೇಹವನ್ನು ಪತ್ತೆ ಮಾಡಿದ್ದಾರೆ. ಸಮೀಪದಲ್ಲಿ ತಲೆ ಕೂಡಾ ಪತ್ತೆಯಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ ಮತ್ತು ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ.
ಮಗುವಿನ ಭೀಕರ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ, ಅವನ ಕುಟುಂಬ ಮತ್ತು ಇತರ ಸ್ಥಳೀಯರು ಪ್ರತಿಭಟನೆಗಳನ್ನು ನಡೆಸಿದರು. ಪ್ರೀತ್ ವಿಹಾರ್ ಪ್ರದೇಶದಲ್ಲಿ ರಸ್ತೆಯನ್ನು ತಡೆದರು. ಆಕ್ರೋಶಗೊಂಡ ಪ್ರತಿಭಟನಾಕಾರರು ಗುಂಪನ್ನು ಚದುರಿಸಲು ಯತ್ನಿಸುತ್ತಿದ್ದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿರುವುದಾಗಿ ವರದಿಯಾಗಿದೆ.