ಪೂಂಜಾಲಕಟ್ಟೆ ಪೊಲೀಸರಿಂದ ಯುವ ವಕೀಲ ಕುಲ್’ದೀಪ್
ಶೆಟ್ಟಿ ಮೇಲೆ ಹಲ್ಲೆ ಆರೋಪ: ಸುಳ್ಯ ವಕೀಲರ ಸಂಘದ ವತಿಯಿಂದ ಪ್ರತಿಭಟನೆ
ಮಂಗಳೂರು
ವಕೀಲರ ಸಂಘದ ಸದಸ್ಯ, ಯುವ ವಕೀಲ ಕುಲ್’ದೀಪ್
ಶೆಟ್ಟಿಯವರ ಮೇಲೆ ಪುಂಜಾಲ್ಕಟ್ಟೆ ಪೊಲೀಸರು
ಪೊಲೀಸ್ ಠಾಣೆಯಲ್ಲಿ ಹಲ್ಲೆ ನಡೆಸಿ ದೌರ್ಜನ್ಯವೆಸಗಿದ್ದು,ಈ
ಘಟನೆಯನ್ನು ಸುಳ್ಯ ವಕೀಲರ ಸಂಘ(ರಿ) ತೀವ್ರವಾಗಿ
ಖಂಡಿಸಿದೆ. ಇಂದು ಸುಳ್ಯ ನ್ಯಾಯಾಲಯದ ಬಳಿ ಮುಖ್ಯ ರಸ್ತೆಯಲ್ಲಿ ವಕೀಲರ ಸಂಘದ ವತಿಯಿಂದ ಪ್ರತಿಭಟನೆ ಮಾಡಿ ಹಲ್ಲೆಗೊಳಗಾದ ಯುವ ವಕೀಲರಾದ ಕುಲ್ ದೀಪ್ ಶೆಟ್ಟಿಯವರಿಗೆ ನ್ಯಾಯ ಸಿಗಬೇಕು. ಮತ್ತು ಹಲ್ಲೆ ನಡೆಸಿರುವಂತಹ ಪೊಲೀಸರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಧಿಕ್ಕಾರವನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುಳ್ಯ ವಕೀಲರ ಸಂಘದ ಅಧ್ಯಕ್ಷ ಕೆ ನಾರಾಯಣ ಹಲ್ಲೆಗೊಳಗಾದ ವಕೀಲರು ತಮ್ಮ ಜಾಗದ ತಕರಾರಿನ ಬಗ್ಗೆ
ಬಂಟ್ವಾಳ ಸಿವಿಲ್ ನ್ಯಾಯಾಲಯದಲ್ಲಿ ತಾತ್ಕಾಲಿಕ
ತಡಯಾಜ್ಞೆ ಪಡೆದುಕೊಂಡಿದ್ದು, ಆದರೆ ಪ್ರತಿವಾದಿಗಳು
ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿರುತ್ತಾರೆ ಎಂದು ಅವರಮೇಲೆ ದೂರು ನೀಡಲಾಗಿತ್ತು.
ಸದರಿ ದೂರನ್ನು ಸ್ವೀಕರಿಸಿದ ಪೊಲೀಸರು ರಾತ್ರೋರಾತ್ರಿ ಕುಲ್ ದೀಪ್ ಶೆಟ್ಟಿ ಅವರ ಮನೆಗೆ ಬಂದು ಅವರು ವಕೀಲರೆಂದು ಪರಿಗಣಿಸದೆ ಅವರ ಮನೆಯ ಸದಸ್ಯರ ಮುಂದೆ ಅವರನ್ನು ಎಳೆದಾಡಿ ಪೊಲೀಸ್ ವಾಹನದಲ್ಲಿ ಕುಳ್ಳಿರಿಸಿ ಠಾಣೆಗೆ ಕರೆದೋಯ್ದು ಸೆಕ್ಷನ್ 379, 447ರಂತೆ ಪ್ರಕರಣ ದಾಖಲಿಸಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಅಲ್ಲದೆ ಮಾರನೇ ದಿನ ಸಂಜೆ 4 ಘಂಟೆವರೆಗೆ ಅವರನ್ನು ಠಾಣೆಯಲ್ಲಿ ಕುಳ್ಳಿರಿಸಿ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನ್ಯಾಯಾಲಯದಲ್ಲಿ ಹಿರಿಯ ವಕೀಲರಾದ ಎಸ್ ಪಿ ಚಂಗಪ್ಪ ಅವರು ಕುಲದೀಪ್ ಶೆಟ್ಟಿ ಅವರ ಪರ ವಾದ ಮಂಡಿಸಿ ಜಾಮಿನಿನಲ್ಲಿ ಬಿಡುಗಡೆಗೊಳಿಸಿದ್ದಾರೆ.
ಆದ್ದರಿಂದ ಒಬ್ಬ ಯುವಕೀಲರ ವಿರುದ್ಧ ಪೊಲೀಸರ ಈ ದೌರ್ಜನ್ಯವನ್ನು ಸುಳ್ಯ ವಕೀಲರ ಸಂಘದ ವತಿಯಿಂದ ನಾವು ತೀವ್ರವಾಗಿ ಖಂಡಿಸುತ್ತಿದ್ದು, ಅವರಿಗೆ ನ್ಯಾಯ ಸಿಗದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಸುಳ್ಯ ವಕೀಲರ ಸಂಘ ಎಚ್ಚರಿಕೆ ನೀಡುತ್ತಿದೆ ಎಂದು ಅವರು ಹೇಳಿದರು.
ಸಂಘದ ಕೋಶಾಧಿಕಾರಿ ವಕೀಲ ಜಗದೀಶ್ ಡಿ ಪಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿ, ಕಾರ್ಯದರ್ಶಿ ಅಬೂಬಕ್ಕರ್ ಜೆ ಎನ್ ವಂದಿಸಿದರು.
ಪ್ರತಿಭಟನೆಯಲ್ಲಿ ಸುಳ್ಯ ವಕೀಲರ ಸಂಘದ ಪದಾಧಿಕಾರಿಗಳು ಸದಸ್ಯರು ಹಿರಿಯ ಕಿರಿಯ ವಕೀಲರು ಭಾಗವಹಿಸಿದ್ದರು.