ಸಂಪಾಜೆ ಪರಿಸರದ ಇಬ್ಬರು ವಿವಾಹಿತ ಮಹಿಳೆಯರು ನಾಪತ್ತೆ: ಮಹಿಳೆಯರನ್ನು ಕಂಡುಬಂದಲ್ಲಿ ಸುಳ್ಯ ಪೊಲೀಸ್ ಠಾಣೆಗೆ ತಿಳಿಸುವಂತೆ ಪೊಲೀಸ್ ಪ್ರಕಟಣೆ
ಸುಳ್ಯ: ಸಂಪಾಜೆ ಪರಿಸರದಲ್ಲಿ ಪ್ರತ್ಯೇಕ ಘಟನೆಗೆ ಸಂಬಂಧಿಸಿದಂತೆ ಇಬ್ಬರು ವಿವಾಹಿತ ಮಹಿಳೆಯರು ತಮ್ಮತಮ್ಮ ಮನೆಯಿಂದ ಕಳೆದ ಎರಡು ತಿಂಗಳಿನಿಂದ ಕಾಣೆಯಾಗಿದ್ದು, ಅವರನ್ನು ಎಲ್ಲಿಯಾದರೂ ಕಂಡುಬಂದಲ್ಲಿ ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸುಳ್ಯ ಪೊಲೀಸ್ ಠಾಣೆಯಿಂದ ಪ್ರಕಟಣೆ ನೀಡಲಾಗಿದೆ.

ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಕೀಲಾರು ಮೂಲೆ ಎಂಬಲ್ಲಿ ವಾಸಿಸುತ್ತಿದ್ದ ನಾಗವೇಣಿ 28 ವರ್ಷ ಎಂಬ ಮಹಿಳೆ ಸೆಪ್ಟೆಂಬರ್ 21ರಂದು ಅರಂತೋಡು ಪೋಸ್ಟ್ ಆಫೀಸಿಗೆ ಹೋಗಿ ಬರುವುದಾಗಿ ಮಕ್ಕಳ ಬಳಿ ಹೇಳಿ ಹೋದವರು ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದು, ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿರುತ್ತದೆ.
ಸಂಬಂಧಿಕರ ಮನೆಯಲ್ಲಿ ಮತ್ತು ಇತರ ಎಲ್ಲಾ ಕಡೆಯಲ್ಲಿ ಹುಡುಕಾಡಿದರು ಅವರು ಕಾಣದೇ ಇರುವ ಹಿನ್ನೆಲೆಯಲ್ಲಿ ಮಹಿಳೆಯ ಮನೆಯವರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈಕೆ ಕಾಣೆಯಾದ ಸಂದರ್ಭ ಚೂಡಿದಾರ ಬಟ್ಟೆಯನ್ನು ಧರಿಸಿದ್ದು ಸಪೂರ ಶರೀರದ ಬಿಳಿ ಮೈಬಣ್ಣದಿಂದ ಕೂಡಿದವರಾಗಿದ್ದಾರೆ. ಕನ್ನಡ ತುಳು ಮಲಯಾಳಂ ಭಾಷೆ ಮಾತನಾಡುವ ಇವರು ಎಲ್ಲಿಯಾದರೂ ಕಾಣಿಸಿದ್ದರೆ ಸುಳ್ಯ ಪೊಲೀಸ್ ಠಾಣೆಗೆ ತಿಳಿಸುವಂತೆ ಸುಳ್ಯ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದೇ ರೀತಿ ಮತ್ತೊಂದು ಪ್ರಕರಣದಲ್ಲಿ ಸಂಪಾಜೆ ಗ್ರಾಮದ ನೆಲ್ಲಿಕುಮೇರಿ ಪರಿಸರದ ಸುಮಾರು 38 ವರ್ಷ ಪ್ರಾಯದ ವಿವಾಹಿತ ಮಹಿಳೆ ಮಹಾಲಕ್ಷ್ಮಿ ಎಂಬವರು ಸೆಪ್ಟೆಂಬರ್ 4ರಂದು ಮನೆಯಿಂದ ರಬ್ಬರ್ ಟ್ಯಾಪಿಂಗ್ಗೆ ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು ಇವರನ್ನು ತಮಿಳುನಾಡು ಮತ್ತು ಇತರ ಸಂಬಂಧಿಕರ ಕಡೆಗಳಲ್ಲಿ ವಿಚಾರಿಸಲಾಗಿದ್ದು ಇದುವರೆಗೆ ಎಲ್ಲಿಯೂ ಕೂಡ ಇವರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಆದ್ದರಿಂದ ಇವರನ್ನು ಹುಡುಕಿ ಕೊಡುವಂತೆ ಅವರ ಮನೆಯವರು ಸುಳ್ಯ ಠಾಣೆಗೆ ದೂರು ನೀಡಿದ್ದಾರೆ.
ಇವರು ಕೂಡ ಕನ್ನಡ ತುಳು ಮಲಯಾಳಂ ತಮಿಳು ಮಾತನಾಡುವವರಾಗಿದ್ದು ಬಿಳಿ ಮೈ ಬಣ್ಣದಿಂದ ಕೂಡಿದವರಾಗಿದ್ದಾರೆ. ಇವರನ್ನು ಕೂಡ ಕಂಡು ಬಂದಲ್ಲಿ ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.