ವಾಟ್ಸಾಪ್ ಕಮ್ಯೂನಿಟಿ: ಹೊಸ ಫೀಚರ್ಸ್ ಬಿಡುಗಡೆ
WhatsApp Communities: ವಾಟ್ಸಾಪ್ ತನ್ನ ಬಳಕೆದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಕಷ್ಟು ಹೊಸ ವೈಶಿಷ್ಟ್ಯಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಇದೀಗ ವಾಟ್ಸಾಪ್ ಕಮ್ಯೂನಿಟಿ ಎಂಬ ಹೊಸ ವೈಶಿಷ್ಟ್ಯವನ್ನು ವಾಟ್ಸಾಪ್ ಪರಿಚಯಿಸಿದೆ ಹಾಗೂ ಗ್ರೂಪ್ನಲ್ಲಿ ಇರುವ ಸದಸ್ಯರ ಸಂಖ್ಯೆಯನ್ನು 1024ಕ್ಕೆ ಏರಿಕೆ ಮಾಡಿದೆ. ಅನೇಕರಿಗೆ ವಾಟ್ಸಾಪ್ ಕಮ್ಯೂನಿಟಿ ಎಂದರೆ ಏನು ಎಂಬುದು ಅರ್ಥವಾಗದೇ ಇನ್ನೂ ಗೊಂದಲದಲ್ಲಿ ಇದ್ದಾರೆ. ನೀವು ಸಹ ಇದೇ ರೀತಿಯ ಗೊಂದಲದಲ್ಲಿದ್ದರೆ ವಾಟ್ಸಾಪ್ ಕಮ್ಯೂನಿಟಿಯ ಬಗ್ಗೆ ನೀವು ಈ ಸ್ಟೋರಿಯಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
ವಾಟ್ಸಾಪ್ ಕಮ್ಯೂನಿಟಿಯಲ್ಲಿ ನೀವು 20 ವಾಟ್ಸಾಪ್ ಗ್ರೂಪ್ಗಳನ್ನು ಒಟ್ಟು ಮಾಡಲು ಸಾಧ್ಯವಾಗುತ್ತದೆ. ವಾಟ್ಸಾಪ್ನ ಮೇಲಿನ ಎಡಭಾಗದಲ್ಲಿ ನಿಮಗೆ ವಾಟ್ಸಾಪ್ ಕಮ್ಯೂನಿಟಿಯನ್ನು ರಚಿಸಲು ಆಯ್ಕೆಯನ್ನು ನೀಡಲಾಗಿದೆ. ಹಾಗಾದರೆ ಈ ವಾಟ್ಸಾಪ್ ಕಮ್ಯೂನಿಟಿಯಿಂದ ಆಗುವ ಲಾಭವೇನು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಇದನ್ನು ಅತ್ಯಂತ ಸುಲಭವಾಗಿ ಗ್ರೂಪ್ಗಳ ಗ್ರೂಪ್ ಎಂದು ಕರೆಯಬಹುದಾಗಿದೆ.
ಉದಾಹರಣೆಗೆ ನೀವು ಈಗ ವಾಟ್ಸಾಪ್ನ 20 ಗ್ರೂಪ್ಗಳ ಸದಸ್ಯರಾಗಿದ್ದೀರಿ ಎಂದುಕೊಳ್ಳೋಣ. ನೀವು ಈ 20 ಗ್ರೂಪ್ಗಳಿಗೆ ಒಂದೇ ರೀತಿಯ ಸಂದೇಶವನ್ನು ಕಳುಹಿಸುತ್ತಿದ್ದೀರಾ ಅಂದರೆ ಪ್ರತಿ ಗ್ರೂಪ್ಗಳಿಗೂ ಆ ಮೆಸೇಜ್ನ್ನು ಫಾರ್ವಡ್ ಮಾಡಬೇಕು ಇಲ್ಲವೇ ಟೈಪ್ ಮಾಡಬೇಕು. ಆದರೆ ಕಮ್ಯೂನಿಟಿ ಆಯ್ಕೆಯ ಮೂಲಕ ನೀವು ಈ 20 ಗ್ರೂಪ್ಗಳನ್ನೇ ಒಟ್ಟು ಮಾಡಿ ಒಂದು ಗ್ರೂಪ್ ಮಾಡಬಹುದು. ಆಮೇಲೆ ನೀವು ಒಂದು ಬಾರಿ ಈ ಕಮ್ಯೂನಿಟಿಗೆ ನೀವು ಕಳಿಸಬೇಕೆಂದುಕೊಂಡಿದ್ದ ಮೆಸೇಜ್ನ್ನು ಸೆಂಡ್ ಮಾಡಿದರೆ ಆಯ್ತು. ಅದು ನೀವು ರಚನೆ ಮಾಡಿದ ಕಮ್ಯೂನಿಟಿಯ ಒಳಗೆ ಇರುವ ಎಲ್ಲಾ ಗ್ರೂಪ್ಗಳಿಗೆ ರವಾನೆ ಆಗಲಿದೆ.
ಇನ್ನೊಂದು ವಿಶೇಷ ಅಂದರೆ ಇಲ್ಲಿ ಬಳಕೆದಾರರ ಗೌಪ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಅಡ್ಮಿನ್ಗಳನ್ನು ಹೊರತುಪಡಿಸಿ ಇನ್ಯಾರಿಗೂ ಸಿಗೋದಿಲ್ಲ. ಅಲ್ಲದೇ ನೀವು ನಿಮ್ಮ ಕಮ್ಯೂನಿಟಿಗೆ ವಿವರಣೆ ನೀಡಲು ಸಹ ಅವಕಾಶ ಇರುತ್ತದೆ. ಇಲ್ಲಿ ನೀವು ಯಾಕೆ ಈ ಕಮ್ಯೂನಿಟಿ ರಚಿಸಿದ್ದೀರಿ ಎಂದು ಬರೆದುಕೊಳ್ಳಬಹುದು.
ನೀವು ಕೂಡ ವಾಟ್ಸಾಪ್ ಕಮ್ಯೂನಿಟಿ ರಚಿಸಬೇಕೆಂದುಕೊಂಡಿದ್ದೀರೇ…? ಹಾಗಾದರೆ ಈ ಹಂತಗಳನ್ನು ಪಾಲಿಸಿ
ಕಮ್ಯೂನಿಟಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಇಲ್ಲಿ ನೀವು ನ್ಯೂ ಕಮ್ಯೂನಿಟಿ ಎಂಬ ಆಯ್ಕೆಯನ್ನು ಆರಿಸಿಕೊಳ್ಳಬೇಕು. ಆಗ ನಿಮಗೆ ಸಾರ್ಟ್ ಯುವರ್ ಕಮ್ಯೂನಿಟಿ ಎಂಬ ಆಯ್ಕೆ ಗೋಚರವಾಗಲಿದೆ.
Get Started ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಕಮ್ಯೂನಿಟಿಯ ಹೆಸರು ಹಾಗೂ ವಿವರಣೆಯನ್ನು ಬರೆಯಿರಿ.
ಬಲಭಾಗದಲ್ಲಿರುವ ಫಾರ್ವಡ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಆಗ ನಿಮಗೆ ಕ್ರಿಯೇಟ್ ನ್ಯೂ ಗ್ರೂಪ್ ಮತ್ತು ಆ್ಯಡ್ ಎನ್ ಎಕ್ಸಿಸ್ಟಿಂಗ್ ಗ್ರೂಪ್ ಎಂಬ ಆಯ್ಕೆ ಗೋಚರವಾಗುತ್ತೆ.
ನಿಮ್ಮ ಬಳಿಕ ಈಗಾಗಲೇ ಅನೇಕ ಗ್ರೂಪ್ ಇದ್ದರೆ ಅವುಗಳನ್ನು ಆ್ಯಡ್ ಮಾಡಿ.
ನೀವು ಯಾವ್ಯಾವ ವಾಟ್ಸಾಪ್ ಗ್ರೂಪ್ಗಳ ಸದಸ್ಯರಿದ್ದೀರೋ ಆ ಎಲ್ಲ ಗ್ರೂಪ್ಗಳು ನಿಮಗೆ ಗೋಚರವಾಗಲಿದೆ.
ಅವುಗಳನ್ನು ಆ್ಯಡ್ ಮಾಡಿದರೆ ನೀವು ವಾಟ್ಸಾಪ್ ಕಮ್ಯೂನಿಟಿಯನ್ನು ರಚಿಸಿದಂತೆ.