ಆಪರೇಷನ್ ಸಿಂಧೂರ: ಕಾರ್ಯಾಚರಣೆಯ ಮಾಹಿತಿ ಬಿಚ್ಚಿಟ್ಟ ಕರ್ನಲ್ ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ
ಬೆಳಗಾವಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಾರತೀಯರ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ನಡೆದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬಗ್ಗೆ ಸಂಪೂರ್ಣ ಮಾಹಿತಿ ಬಿಚ್ಚಿಟ್ಟ ಕರ್ನಲ್ ಸೋಫಿಯಾ ಖುರೇಷಿ ಅವರು ಬೆಳಗಾವಿ ಜಿಲ್ಲೆಯ ಸೊಸೆ. ಈ ವಿಷಯ ಬೆಳಗಾವಿಗರು ಮಾತ್ರವಲ್ಲ; ಇಡೀ ಕನ್ನಡಿಗರಿಗೆ ಇನ್ನಷ್ಟು ಹೆಮ್ಮೆ ತಂದಿದೆ.

ಬಹುರಾಷ್ಟ್ರೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಭಾರತೀಯ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಲ್ ಸೋಫಿಯಾ ಖುರೇಷಿ ಅವರು, ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದವರಾದ ಕರ್ನಲ್ ತಾಜುದ್ದೀನ್ ಬಾಗೇವಾಡಿ ಅವರ ಪತ್ನಿ.
2015ರಲ್ಲಿ ಸೋಫಿಯಾ ಹಾಗೂ ತಾಜುದ್ದೀನ್ ಪ್ರೇಮ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಕರ್ನಲ್ ಸೋಫಿಯಾ ಮೂಲತಃ ಗುಜರಾತ್ ರಾಜ್ಯದ ಬರೋಡಾದವರು. ಬೆಳಗಾವಿಯ ವೀರಯೋಧನಿಗೆ ಒಲಿದ ಬಳಿಕ ಅವರು ಬೆಳಗಾವಿಯ ಸೊಸೆಯಾಗಿ ಹೆಮ್ಮೆ ತಂದಿದ್ದಾರೆ.
ಪೆಹಲ್ಗಾಮ್‌ನಲ್ಲಿ ಭಾರತೀಯರ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ, ಏರ್‌ಸ್ಟ್ರೈಕ್ ಮಾಡಿ ಪಾಕ್ ಉಗ್ರರ ನೆಲೆಗಳನ್ನು ಹೇಗೆ ಧ್ಚಂಸಗೊಳಿಸಿದ್ದೇವೆ, ಉಗ್ರರ ಅಡಗುದಾಣಗಳು ಎಲ್ಲಿವೆ, ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಉದ್ದೇಶ ಏನು, ಯಶಸ್ಸು ಎಷ್ಟರಮಟ್ಟಿಗೆ ಸಿಕ್ಕಿದೆ ಎಂಬುದನ್ನು ಖುದ್ದು ಸೋಫಿಯಾ ಅವರೇ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
ಬಹುರಾಷ್ಟ್ರೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಭಾರತೀಯ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಯೂ ಸೋಫಿಯಾ ಅವರದ್ದು.
ಸದ್ಯ ಸೋಫಿಯಾ ಜಮ್ಮುವಿನಲ್ಲಿ, ತಾಜುದ್ದೀನ್ ಜಾನ್ಸಿಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.