ಪುತ್ತೂರು ಮಹಿಳಾಪೊಲೀಸ್ ಠಾಣೆಗೆ ಜಾಗ ಮಂಜೂರು: ಶಾಸಕ ಅಶೋಕ್ ರೈ
ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಮಹಿಳಾ ಪೊಲೀಸ್ ಠಾಣೆ ಕಟ್ಟಡ ಸ್ಥಳಾಂತರವಾಗಲಿದೆ.

ಈ ಕುರಿತು ಶಾಸಕ ಅಶೋಕ್ ಕುಮಾರ್ ರೈ ಮಾಹಿತಿ ನೀಡಿದ್ದು ಪುತ್ತೂರು ಬಸ್ ನಿಲ್ದಾಣದ ಬಳಿ ಹೊಸ ಠಾಣೆ ನಿರ್ಮಾಣಕ್ಕೆ ಕಂದಾಯ ಇಲಾಖೆ ಜಾಗ ಮಂಜೂರು ಮಾಡಿದೆ ಎಂದು ತಿಳಿಸಿದ್ದಾರೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ದಿ ಹೊಂದುತ್ತಿದ್ದು ಅಲ್ಲಿದ್ದ ಅನಧಿಕೃತ ಮನೆಗಳನ್ನು ಈಗಾಗಲೇ ತೆರವು ಮಾಡಲಾಗಿದೆ. ಸದ್ಯ ಅಲ್ಲಿ ಮಹಿಳಾ ಪೊಲೀಸ್ ಠಾಣೆ ಕಟ್ಟಡವಿದ್ದು ಅದನ್ನು ತೆರವು ಮಾಡುವುದು ಅಥವಾ ಬೇರೆಡೆ ಸ್ಥಳಾಂತರ ಮಾಡಿಸುವುದಾಗಿ ಈ ಹಿಂದೆ ಶಾಸಕರು ತಿಳಿಸಿದ್ದರು. ಈ ಕಟ್ಟಡ ತೆರವುಗೊಂಡಲ್ಲಿ ದೇವಸ್ಥಾನ ಸುಂದರವಾಗಿ ರೂಪುಗೊಂಡಂತಾಗುತ್ತದೆ. ಹೊಸ ಮಹಿಳಾ ಠಾಣೆಗೆ ಬಸ್ ನಿಲ್ದಾಣದ ಬಳಿ ಸ. ನಂ.,೧೨೪/೫ಪಿ೨ ರಲ್ಲಿ ೮ ಸೆಂಟ್ಸ್ ಜಾಗವನ್ನು ಶಾಸಕರ ಮನವಿ ಮೇರೆಗೆ ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಶಾಸಕರ ಸತತ ಪ್ರಯತ್ನಕ್ಕೆ ಸಿಕ್ಕಿದ ಫಲ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿ ಅಕ್ರಮವಾಗಿದ್ದ ಮನೆಗಳನ್ನು ತೆರವುಗೊಳಿಸಿದ ಬಳಿಕ ದೇವಳಕ್ಕೆ ಅಡ್ಡವಾಗಿದ್ದ ಮಹಿಳಾ ಪೊಲೀಸ್ ಠಾಣಾ ಕಟ್ಟಡವನ್ನು ತೆರವು ಮಾಡಬೇಕಿದೆ ಎಂದು ಅನೇಕ ಭಕ್ತಾದಿಗಳು ಶಾಸಕರಲ್ಲಿ ಮೌಖಿಕ ಮನವಿಯನ್ನು ಮಾಡಿಕೊಂಡಿದ್ದರು. ಈ ಕಟ್ಟಡ ತೆರವು ಮಾಡಿದ್ದೇ ಆದಲ್ಲಿ ದೇವಸ್ಥಾನಕ್ಕೆ ಇನ್ನಷ್ಟು ಜಾಗ ಲಭ್ಯವಾಗಲಿದ್ದು ಮಾತ್ರವಲ್ಲದೆ ದೇವಸ್ಥಾನ ಹಾಗೂ ದೇವಳದ ಪವಿತ್ರ ಕೆರೆಯೂ ಅತಿ ಸುಂದರವಾಗಿ ಕಾಣಿಸಲಿದೆ. ಠಾಣಾ ಕಟ್ಟಡವನ್ನು ತೆರವು ಮಾಡಬೇಕಾದಲ್ಲಿ ಹೊಸ ಠಾಣೆಯನ್ನು ನಿರ್ಮಾಣ ಮಾಡಬೇಕಿತ್ತು. ತಾನೇ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಜಾಗ ಹುಡುಕಿದ ಶಾಸಕರು ಬಸ್ ನಿಲ್ದಾಣದ ಬಳಿ 8 ಸೆಂಟ್ಸ್ ಜಾಗವನ್ನು ಪಡೆಯುವಲ್ಲಿ ಸಫಲರಾದರು.