ಕರಾವಳಿ

ಮದರಸ ವಿದ್ಯಾರ್ಥಿಗಳೊಂದಿಗೆ ತರಗತಿಯಲ್ಲಿ ಕುಳಿತು ಸಂತೋಷ ಹಂಚಿಕೊಂಡ ಸುಳ್ಯ ತಹಶೀಲ್ದಾರ್ ಕು.ಅನಿತಾ ಲಕ್ಷ್ಮಿ

ಸುಳ್ಯ ತಹಶೀಲ್ದಾರ್ ಕು. ಅನಿತಾ ಲಕ್ಷ್ಮಿ ರವರು ಇಂದು ಜಯನಗರ ವಾರ್ಡಿಗೆ ಭೇಟಿ ನೀಡಿದ ಸಂದರ್ಭ ಜಯನಗರ ಜನ್ನತುಲ್ ಉಲೂಮ್ ಮದರಸ ಕಟ್ಟಡ ಮತ್ತು ಮಸೀದಿ ಪರಿಸರವನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪಠಣಾ ತರಗತಿ ನಡೆಯುತ್ತಿದ್ದು ತರಗತಿಯನ್ನು ಪರಿಶೀಲಿಸಿದ ತಹಶೀಲ್ದಾರ್ ರವರು ಮದರಸದ ಪುಟಾಣಿ ವಿದ್ಯಾರ್ಥಿಗಳೊಂದಿಗೆ ಕುಳಿತು ಸಂತೋಷವನ್ನು ಹಂಚಿಕೊಂಡರು.


ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಮದರಸಾ ಪಠ್ಯಪುಸ್ತಕದ ಬಗ್ಗೆ ಅರೇಬಿಕ್ ಅಕ್ಷರಗಳ ಬಗ್ಗೆ ಕೇಳಿ ಅಲ್ಪಸಮಯ ವಿದ್ಯಾರ್ಥಿಗಳೊಂದಿಗೆ ಕಳೆದರು.
ಮದರಸ ಮುಖ್ಯೋಪಾಧ್ಯಾಯರಾದ ಅಬ್ದುಲ್ ಕರೀಂ ಸಕಾಫಿ ಅವರೊಂದಿಗೆ ಮಾತನಾಡಿ ಮಕ್ಕಳಿಗೆ ಯಾವುದೆಲ್ಲಾ ವಿಷಯಗಳ ಬಗ್ಗೆ ಬೋಧನೆಯನ್ನು ನೀಡುತ್ತಿದ್ದೀರಿ, ಮತ್ತು ಮದರಸದಲ್ಲಿ ವಿದ್ಯಾರ್ಥಿಗಳಿಗೆ ಎಷ್ಟನೆಯ ತರಗತಿಯವರೆಗೆ ಅರಬಿಕ್ ಶಿಕ್ಷಣವನ್ನು ನೀಡುತ್ತೀರಿ ಎಂಬ ಮಾಹಿತಿ ಕೇಳಿದರು.


ಅದಕ್ಕೆ ಉತ್ತರಿಸಿದ ಅಧ್ಯಾಪಕರು ಕುರಾನ್ ಪಠಣ , ಕರ್ಮಶಾಸ್ತ್ರ,ಮತ್ತು ಇತಿಹಾಸ ಪಾಠಗಳನ್ನು ಕಲಿಸುವುದಾಗಿ, ಹಾಗೂ ಒಂದನೇ ತರಗತಿಯಿಂದ ಪ್ಲಸ್ ಟೂ ವರೆಗೆ ಮದರಸ ವಿದ್ಯಾಭ್ಯಾಸವನ್ನು ನೀಡುವುದಾಗಿ ಹೇಳಿದರು.

ಪ್ರಥಮ ಬಾರಿಗೆ ಮದರಸ ತರಗತಿ ಕೊಠಡಿಗೆ ಒಬ್ಬ ಮಹಿಳಾ ಅಧಿಕಾರಿ ಬಂದಿರುವುದನ್ನು ಸಂತೋಷದಿಂದ ಸ್ವೀಕರಿಸಿದ ವಿದ್ಯಾರ್ಥಿಗಳು,ಮತ್ತು ಅಧ್ಯಾಪಕರು ಅವರು ಕೇಳಿದ ಪ್ರಶ್ನೆಗಳಿಗೆ ಉತ್ಸುಕರಾಗಿ ಉತ್ತರವನ್ನು ಹೇಳಿದರು.

ಈ ಸಂದರ್ಭದಲ್ಲಿ ಸ್ಥಳೀಯ ನಗರ ಪಂಚಾಯತ್ ಸದಸ್ಯೆ ಶಿಲ್ಪಾ ಸುದೇವ್, ಸುಳ್ಯ ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಶ್, ತಾಲೂಕು ಕಚೇರಿ ಸಿಬ್ಬಂದಿ ನಾರಾಯಣ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!