ಉಳ್ಳಾಲ: ನಿಸ್ವಾರ್ಥ ಮನೋಭಾವದ ಕಾರ್ಯಕರ್ತರಿರುವುದರಿಂದ ಜಿಲ್ಲೆಯಲ್ಲಿ ಹಿಂದುತ್ವ ಜೀವಂತವಾಗಿದೆ-ಪುತ್ತಿಲ
ಉಳ್ಳಾಲ ಕ್ಷೇತ್ರದಲ್ಲಿರುವ ಹಿಂದೂ ವಿರೋಧಿ ಜನಪ್ರತಿನಿಧಿಯ ಕೈಗೊಂಬೆಯಂತೆ ಪೊಲೀಸ್ ಇಲಾಖೆ ವರ್ತಿಸಿದರೆ ಮುಂದಿನ ದಿನಗಳಲ್ಲಿ ಉತ್ತರವನ್ನು ಹಿಂದೂ ಸಮಾಜ ಕೊಡಲು ಸಿದ್ಧವಿದೆ ಎಂದು ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ. ಜೂ.4ರಂದು ಕಾಪಿಕಾಡು ಗಟ್ಟಿ ಸಮಾಜ ಭವನದಲ್ಲಿ ಹಿಂದೂ ಬಾಂಧವರು ಉಳ್ಳಾಲ ಇವರ ನೇತೃತ್ವದಲ್ಲಿ ಜರಗಿದ ಭಾರತ್ ಮಾತಾ ಪೂಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇತ್ತೀಚೆಗೆ ಸೋಮೇಶ್ವರ ಬೀಚಿನಲ್ಲಿ ಹಿಂದೂ ಸಹೋದರಿಯರಿಗೆ ಅನ್ಯಾಯವಾದಾಗ ಕಾರ್ಯಕರ್ತರು ಸಂಘರ್ಷದ ಮೂಲಕ ಉತ್ತರವನ್ನು ನೀಡಿದ್ದಾರೆಯೇ ಹೊರತು ಪಲಾಯನವಾದಿಗಳಾಗಿಲ್ಲ.
ಕಾರ್ಯಕರ್ತರ ವಿರುದ್ಧ ಕೇಸು ಹಾಕಲಾಗಿದೆ. ಕೈ ಬಳೆ ಹಾಕಿದ ಸಮಾಜ ನಮ್ಮದಲ್ಲ. ದ್ವೇಷದ ರಾಜಕಾರಣವನ್ನು ಮಾಡದೆ ಪ್ರೀತಿ ವಿಶ್ವಾಸದ ವಾತಾವರಣ ನಿರ್ಮಿಸುವುದು ಇಲ್ಲಿನ ಜನಪ್ರತಿನಿಧಿಯ ಕರ್ತವ್ಯ ಎಂದು ಅವರು ಹೇಳಿದರು.
ಸೋಮೇಶ್ವರದಲ್ಲಿ ಮೋಜು ಮಸ್ತಿಗೆ ಹಿಂದೂ ಸಹೋದರಿಯರನ್ನು ಉಪಯೋಗಿಸುವ ಸಂದರ್ಭದಲ್ಲಿ ಕಾರ್ಯಕರ್ತರು ವಿರೋಧ ಮಾಡಿದ್ದಾರೆ. ವಿರೋಧಿಸುವುದು ನಮ್ಮ ಧರ್ಮ. ಕಾರ್ಯಕರ್ತರು ಅವರವರ ಕೆಲಸವನ್ನು ಮಾಡುವಂತಹ ಸಂದರ್ಭದಲ್ಲಿ ವಿರೋಧವನ್ನು ಮಾಡುವವರ ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಉಳ್ಳಾಲ ಮತ್ತು ಪುತ್ತೂರು ಎರಡು ಕ್ಷೇತ್ರಗಳಲ್ಲಿ ಕೂಡಾ ಹಿಂದುತ್ವದ ವಿರೋಧವಿರುವ ಜನಪ್ರತಿನಿಧಿಗಳು ಆಯ್ಕೆಯಾಗಿದ್ದು, ಪ್ರತಿ ಕಾರ್ಯಕರ್ತರೊಂದಿಗೆ ಸಂಪರ್ಕವಿಟ್ಟುಕೊಳ್ಳುತ್ತೇವೆ. ಉಳ್ಳಾಲದಲ್ಲಿ ಹಿಂದೂ ವಿರೋಧಿ ವಿಚಾರಗಳು ನಡೆದರೆ, ಹಲ್ಲೆಗಳು ನಡೆದರೆ ಮುಂದೆ ನಿಂತು ನ್ಯಾಯ ಒದಗಿಸುತ್ತೇವೆ ಎಂದು ಪುತ್ತಿಲ ಹೇಳಿದರು.
ನಿಸ್ವಾರ್ಥ ಮನೋಭಾವದ ಮುಖಾಂತರ ಬದುಕನ್ನು ಸಮಾಜಕ್ಕೆ ಮುಡಿಪಾಗಿಟ್ಟ ಕಾರ್ಯಕರ್ತರಿರುವುದರಿಂದ ಜಿಲ್ಲೆಯಲ್ಲಿ ಹಿಂದುತ್ವ ಜೀವಂತವಾಗಿದೆ. ಅಧಿಕಾರಕ್ಕಾಗಿ ಹಲವು ಬದಲಾವಣೆಗಳಾಗಿರಬಹುದು. ಸ್ವಾರ್ಥದ ವ್ಯವಸ್ಥೆಯಿಂದ ಸವಾಲುಗಳನ್ನು ಸ್ವೀಕರಿಸಿದ್ದೇವೆ ಎಂದು ಪುತ್ತಿಲ ಹೇಳಿದರು.