ರಾಷ್ಟ್ರೀಯ

ಮೊಬೈಲ್ ಬ್ಯಾಂಕಿಂಗ್ ಆ್ಯಪ್‌ಗೆ ವೈರಸ್ ಲಗ್ಗೆ: ಸರ್ಕಾರದ ಎಚ್ಚರಿಕೆ



ನವದೆಹಲಿ: ಮೊಬೈಲ್‌ ಬ್ಯಾಂಕಿಂಗ್‌ ಆ್ಯಪ್‌ಗಳಿಂದ ಮಾಹಿತಿ ಕದಿಯುವ ಹೊಸ ಟ್ರೋಜನ್ ವೈರಸ್‌ ಭಾರತದ ಆ್ಯಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರನ್ನು ಗುರಿ ಮಾಡಿಕೊಂಡಿದೆ ಎಂದು ಕೇಂದ್ರ ಸರ್ಕಾರದ ಸೈಬರ್ ಭದ್ರತಾ ಸಂಸ್ಥೆ ‘ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್’ (ಸಿಇಆರ್‌ಟಿ) ಎಚ್ಚರಿಕೆ ನೀಡಿದೆ.

ಸಾಂದರ್ಭಿಕ ಚಿತ್ರ

ಈ ವೈರಸ್ ಆ್ಯಂಡ್ರಾಯ್ಡ್‌ ಫೋನ್‌ಗಳಲ್ಲಿ ಇರುವ ಮಾಹಿತಿಯನ್ನು ಗ್ರಾಹಕನಿಗೆ ಗೊತ್ತೇ ಆಗದಂತೆ ಕದಿಯಬಲ್ಲದು. ಈ ವೈರಸ್‌ಅನ್ನು ಫೋನ್‌ನಿಂದ ತೆಗೆಯುವುದು ಕೂಡ ಕಷ್ಟ. ಜುಲೈ ತಿಂಗಳಲ್ಲಿ ಇದು ಮೊದಲ ಬಾರಿಗೆ ದೇಶದ ಸೈಬರ್ ಲೋಕದಲ್ಲಿ ಕಾಣಿಸಿಕೊಂಡಿತ್ತು. ಈಗ ಇದರ ಐದನೆಯ ಆವೃತ್ತಿ ಕಾಣಿಸಿಕೊಂಡಿದೆ.

‘ದೇಶದ ಬ್ಯಾಂಕಿಂಗ್ ಗ್ರಾಹಕರನ್ನು ಈ ಹೊಸ ಮೊಬೈಲ್ ಬ್ಯಾಂಕಿಂಗ್‌ ವೈರಸ್ ಗುರಿಯಾಗಿಸಿಕೊಂಡಿದೆ ಎಂಬ ಮಾಹಿತಿ ಬಂದಿದೆ. ಆ್ಯಂಡ್ರಾಯ್ಡ್‌ ಕಾರ್ಯಾಚರಣೆ ವ್ಯವಸ್ಥೆ ಇರುವ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲಸ ಮಾಡುವ ಎಸ್‌ಒವಿಎ (ಅಥವಾ ಸೋವಾ) ಟ್ರೋಜನ್ (ಒಂದು ಬಗೆಯ ವೈರಸ್) ಇದು. ಇದು 2021ರ ಸೆಪ್ಟೆಂಬರ್‌ನಲ್ಲಿ ಕಾಳಸಂತೆಯಲ್ಲಿ ಮಾರಾಟಕ್ಕೆ ಮೊದಲ ಬಾರಿಗೆ ಲಭ್ಯವಾಗಿತ್ತು. ಗ್ರಾಹಕರು ಕೀಬೋರ್ಡ್‌ ಮೂಲಕ ಟೈಪ್ ಮಾಡುವ ಮಾಹಿತಿಯನ್ನು (ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್‌) ಇದು ರಹಸ್ಯವಾಗಿ ಸಂಗ್ರಹಿಸುವ ಶಕ್ತಿ ಹೊಂದಿದೆ’ ಎಂದು ಸಿಇಆರ್‌ಟಿ ನೀಡಿರುವ ಎಚ್ಚರಿಕೆಯ ಸಂದೇಶದಲ್ಲಿ ವಿವರಿಸಲಾಗಿದೆ.

ಈ ವೈರಸ್ ಮೊದಲು ಅಮೆರಿಕ, ರಷ್ಯಾ ಮತ್ತು ಸ್ಪೇನ್‌ ದೇಶಗಳನ್ನು ಕೇಂದ್ರೀಕರಿಸಿಕೊಂಡಿತ್ತು. ಆದರೆ, ಈ ವರ್ಷದ ಜುಲೈನಲ್ಲಿ ಭಾರತ ಸೇರಿದಂತೆ ಇನ್ನಷ್ಟು ದೇಶಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಅದು ವಿವರಿಸಿದೆ.

ಕ್ರೋಮ್‌, ಅಮೆಜಾನ್‌ನಂತಹ ಜನಪ್ರಿಯ ಆ್ಯಪ್‌ಗಳ ಲೋಗೊ ಬಳಕೆ ಮಾಡುವ ಕೆಲವು ನಕಲಿ ಆ್ಯಂಡ್ರಾಯ್ಡ್‌ ಆ್ಯಪ್‌ಗಳ ಹಿಂದೆ ಈ ವೈರಸ್ ಬಚ್ಚಿಟ್ಟುಕೊಂಡಿರುತ್ತದೆ. ಇವುಗಳನ್ನು ತಮ್ಮ ಫೋನ್‌ಗೆ ಇನ್‌ಸ್ಟಾಲ್ ಮಾಡಿಕೊಳ್ಳುವ ಗ್ರಾಹಕರನ್ನು ವಂಚಿಸುವುದು ಇದರ ಉದ್ದೇಶ.

‘ಗ್ರಾಹಕರು ಇಂಟರ್ನೆಟ್ ಬ್ಯಾಂಕಿಂಗ್ ಆ್ಯಪ್‌ ಬಳಕೆ ಮಾಡಿದಾಗ ಈ ವೈರಸ್, ಗ್ರಾಹಕರ ವಿವರಗಳನ್ನು ಕದಿಯುತ್ತದೆ. ಅವರ ಬ್ಯಾಂಕ್‌ ಖಾತೆಗಳಿಗೆ ಕೈಹಾಕುತ್ತದೆ. ಬ್ಯಾಂಕಿಂಗ್ ಆ್ಯಪ್‌ಗಳು ಹಾಗೂ ಕ್ರಿಪ್ಟೊ ಕರೆನ್ಸಿ ವಿನಿಮಯ ಆ್ಯಪ್‌ಗಳು ಸೇರಿದಂತೆ 200ಕ್ಕೂ ಹೆಚ್ಚಿನ ಆ್ಯಪ್‌ಗಳನ್ನು ಈ ವೈರಸ್ ಗುರಿಯಾಗಿಸಿಕೊಂಡಿದೆ’ ಎಂದು ಎಚ್ಚರಿಕೆ ನೀಡಲಾಗಿದೆ.

ಇದು ಏನು ಮಾಡುತ್ತದೆ?:
ಬಹುತೇಕ ಆ್ಯಂಡ್ರಾಯ್ಡ್‌ ಬ್ಯಾಂಕಿಂಗ್ ಟ್ರೋಜನ್‌ಗಳ ರೀತಿಯಲ್ಲಿಯೇ ಈ ವೈರಸ್‌ ಅನ್ನು ಎಸ್‌ಎಂಎಸ್‌ ಮೂಲಕ ಹರಡಲಾಗುತ್ತಿದೆ. ನಕಲಿ ಆ್ಯಪ್‌ಅನ್ನು ಆ್ಯಂಡ್ರಾಯ್ಡ್‌ ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿದ ನಂತರದಲ್ಲಿ ಅದು ಆ ಫೋನ್‌ನಲ್ಲಿ ಇರುವ ಇತರ ಎಲ್ಲ ಆ್ಯಪ್‌ಗಳ ವಿವರವನ್ನು ದುಷ್ಕರ್ಮಿಗೆ ರವಾನಿಸುತ್ತದೆ. ಯಾವ ಆ್ಯಪ್‌ಅನ್ನು ಗುರಿಯಾಗಿಸಿಕೊಂಡು ಕೆಲಸ ಮಾಡಬೇಕು ಎಂಬ ಸಂದೇಶವನ್ನು ನಂತರ ದುಷ್ಕರ್ಮಿಯಿಂದ ಪಡೆದುಕೊಳ್ಳುತ್ತದೆ.

ಈ ವೈರಸ್ ಫೋನ್‌ನ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬಲ್ಲದು, ವೆಬ್‌ಕ್ಯಾಮ್ ಮೂಲಕ ವಿಡಿಯೊ ಮಾಡಬಲ್ಲದು. ಮೊಬೈಲ್‌ ಪರದೆಯನ್ನು ತಾನಾಗಿಯೇ ಸ್ವೈಪ್ ಮಾಡಬಲ್ಲದು. ‘ಆ್ಯಂಡ್ರಾಯ್ಡ್‌ ಫೋನ್‌ನಲ್ಲಿ ಇರುವ ಎಲ್ಲ ಮಾಹಿತಿ, ವಿವರಗಳನ್ನು ಗೂಢಲಿಪಿಗೆ ಪರಿವರ್ತಿಸಿ, ಫೋನ್ ಬಳಕೆದಾರರಿಂದ ಹಣಕ್ಕೆ ಪೀಡಿಸುವ ಸಾಮರ್ಥ್ಯ ಕೂಡ ಈ ವೈರಸ್‌ ಇದೆ’ ಎಂದು ಸಿಇಆರ್‌ಟಿ ಹೇಳಿದೆ.

ಬಳಕೆದಾರ ಈ ವೈರಸ್‌ಅನ್ನು ಫೋನ್‌ನಿಂದ ತೆಗೆದುಹಾಕಲು ಮುಂದಾದರೆ, ಮತ್ತೆ ಹೋಮ್‌ ಸ್ಕ್ರೀನ್‌ಗೆ ಮರಳುವ ಇದು ‘ಈ ಆ್ಯಪ್‌ ಸುರಕ್ಷಿತವಾಗಿದೆ’ ಎಂಬ ಸಂದೇಶವು ಫೋನ್ ಪರದೆಯ ಮೇಲೆ ಮೂಡುವಂತೆ ಕೂಡಮಾಡುತ್ತದೆ. ಈ ಆ್ಯಪ್‌ ಗ್ರಾಹಕರ ದತ್ತಾಂಶವನ್ನು ಅಪಾಯಕ್ಕೆ ನೂಕಬಲ್ಲದು, ಹಣಕಾಸಿನ ವಂಚನೆಗೆ ಕಾರಣವಾಗಬಲ್ಲದು ಎಂದು ಕೂಡ ಸಿಇಆರ್‌ಟಿ ತಿಳಿಸಿದೆ.

ಸುರಕ್ಷಿತವಾಗಿರಲು ಏನು ಮಾಡಬೇಕು? ಇಂತಹ ಆ್ಯಪ್‌ಗಳಿಂದ ರಕ್ಷಿಸಿಕೊಳ್ಳಲು ಗ್ರಾಹಕರು ಕೆಲವು ಕ್ರಮಗಳನ್ನು ಅನುಸರಿಸಬೇಕು ಎಂದು ಸಿಇಆರ್‌ಟಿ ಸಲಹೆ ನೀಡಿದೆ

  • ಗ್ರಾಹಕರು ಅಧಿಕೃತ ಆ್ಯಪ್ ಸ್ಟೋರ್‌ನಿಂದ ಮಾತ್ರ ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅಂದರೆ, ಫೋನ್‌ನ ತಯಾರಕರ ಆ್ಯಪ್‌ ಸ್ಟೋರ್ ಅಥವಾ ಫೋನ್‌ನಲ್ಲಿನ ಕಾರ್ಯಾಚರಣೆ ವ್ಯವಸ್ಥೆಯ ಅಧಿಕೃತ ಆ್ಯಪ್‌ ಸ್ಟೋರ್‌ನಿಂದ (ಉದಾಹರಣೆಗೆ, ಆ್ಯಂಡ್ರಾಯ್ಡ್‌ ಆ್ಯಪ್ ಸ್ಟೋರ್) ಡೌನ್‌ಲೋಡ್ ಮಾಡಿಕೊಳ್ಳಬೇಕು.

*ಆ್ಯಪ್‌ ಇನ್‌ಸ್ಟಾಲ್ ಮಾಡುವಾಗ ಅದರ ವಿವರಗಳನ್ನು, ಎಷ್ಟು ಜನ ಅದನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಎಂಬುದನ್ನು, ಬಳಕೆದಾರರು ಆ್ಯಪ್‌ ಬಗ್ಗೆ ಬರೆದಿರುವ ವಿಮರ್ಶೆಗಳನ್ನು ಪರಿಶೀಲಿಸಬೇಕು. ಅಲ್ಲದೆ, ಆ್ಯಪ್‌ ಕುರಿತ ಹೆಚ್ಚುವರಿ ಮಾಹಿತಿ ವಿಭಾಗವನ್ನು ಗಮನಿಸಬೇಕು.

*ಆ್ಯಪ್‌ ಕಾರ್ಯಾಚರಣೆಗೆ ಅಗತ್ಯವಿರುವಷ್ಟು ಅನುಮತಿಗಳನ್ನು ಮಾತ್ರ ಅದಕ್ಕೆ ನೀಡಬೇಕು.

*ಆ್ಯಂಡ್ರಾಯ್ಡ್‌ಗೆ ಕಾಲಕಾಲಕ್ಕೆ ನೀಡುವ ಅಪ್ಡೇಟ್‌ಗಳನ್ನು ಮತ್ತು ಪ್ಯಾಚ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕು.

*ವಿಶ್ವಾಸಾರ್ಹ ಅಲ್ಲದ ವೆಬ್‌ಸೈಟ್‌ಗೆ ಭೇಟಿ ಕೊಡಬಾರದು. ವಿಶ್ವಾಸಾರ್ಹ ಅಲ್ಲದ ವೆಬ್‌ ಕೊಂಡಿಗಳ ಮೇಲೆ ಕ್ಲಿಕ್ ಮಾಡುವಾಗ ಎಚ್ಚರಿಕೆ ವಹಿಸಬೇಕು.

Leave a Reply

Your email address will not be published. Required fields are marked *

error: Content is protected !!