ಕಾಲ್ನಡಿಗೆ ಮೂಲಕ ಪವಿತ್ರ ಮಕ್ಕಾ ತಲುಪಿದ ಪೆರಿಯಡ್ಕದ ಯುವಕ
ಪುತ್ತೂರು: ಉಪ್ಪಿನಂಗಡಿ ಸಮೀಪದ ಪೆರಿಯಡ್ಕದಿಂದ 2023 ಜನವರಿ 30ರಂದು ಸೌದಿ ಅರೇಬಿಯಾದ ಪವಿತ್ರ ಮಕ್ಕಾಗೆ ಕಾಲ್ನಡಿಗೆ ಯಾತ್ರೆ ಹಮ್ಮಿಕೊಂಡಿದ್ದ ಅಬ್ದುಲ್ ಖಲೀಲ್(ನೌಶಾದ್ ಬಿಕೆಎಸ್) ಅವರು ಫೆ.1ರಂದು ಮಕ್ಕಾ ತಲುಪಿದ್ದಾರೆ. ಆ ಮೂಲಕ ಒಂದು ವರ್ಷ ಎರಡು ದಿನಗಳ ತನ್ನ ಸುಧೀರ್ಘ ಕಾಲ್ನಡಿಗೆ ಯಶಸ್ವಿಯಾಗಿ ಪೂರ್ತಿಗೊಂಡಿದ್ದು ಉಮ್ರಾ ಕರ್ಮವನ್ನು ಈಗಾಗಲೇ ನೆರವೇರಿಸಿದ್ದಾರೆ. ಈ ಬಾರಿಯ ಹಜ್ ಕರ್ಮ ನಿರ್ವಹಿಸಿದ ಬಳಿಕ ಅವರು ಊರಿಗೆ ವಾಪಸ್ ಬರಲಿದ್ದಾರೆ.
ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕ ನಿವಾಸಿ ಮುಹಮ್ಮದ್ ಹಾಗೂ ನಫೀಸಾ ದಂಪತಿಗಳ ಪುತ್ರನಾದ ಅಬ್ದುಲ್ ಖಲೀಲ್ ತನ್ನ ಒಂದು ವರ್ಷದ ಯಾತ್ರೆಯಲ್ಲಿ 8150 ಕಿ.ಮೀ ದೂರವನ್ನು ಕಾಲ್ನಡಿಗೆ ಮೂಲಕ ಸಾಗಿ ದಾಖಲೆ ನಿರ್ಮಿಸಿದ್ದಾರೆ. ಭಾರತ, ಪಾಕಿಸ್ತಾನ, ಒಮನ್, ಯುಎಇ ಮತ್ತು ಸೌದಿ ಅರೇಬಿಯಾ ಮೂಲಕ ಅವರು ಮಕ್ಕಾ ತಲುಪಿದ್ದು ಪಾಕಿಸ್ತಾನದಲ್ಲಿ ಅವರ ಕಾಲ್ನಡಿಗೆಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ವಾಘಾ ಗಡಿಯ ಮೂಲಕ ಪಾಕಿಸ್ತಾನ ಪ್ರವೇಶಿಸಿ ಅಲ್ಲಿಂದ ವಿಮಾನದಲ್ಲಿ ಒಮಾನ್ ದೇಶ ಪ್ರವೇಶಿಸಿದ್ದು ಅಲ್ಲಿಂದ ಮತ್ತೆ ಕಾಲ್ನಡಿಗೆಯನ್ನು ಮುಂದುವರಿಸಿದ್ದರು. ಕಾಲ್ನಡಿಗೆ ಮಾಡಿರುವ ದೇಶಗಳಲ್ಲಿ ಅಬ್ದುಲ್ ಖಲೀಲ್‌ರವರಿಗೆ ಉತ್ತಮ ಸಹಕಾರ ದೊರಕಿತ್ತಲ್ಲದೇ ಜನರು ಕೂಡಾ ಇವರ ಜೊತೆ ಹೆಜ್ಜೆ ಹಾಕಿ ಬೆಂಬಲ ನೀಡಿದ್ದರು.
ನನ್ನ ಕಾಲ್ನಡಿಗೆ ಒಂದು ವರ್ಷ ಪೂರ್ತಿಗೊಂಡ ಬಳಿಕ ನಾನು ಪವಿತ್ರ ಮಕ್ಕಾಗೆ ತಲುಪಿದ್ದು ಭಾವಪರವಶನಾಗಿದ್ದೇನೆ. ದೇವರ ಅಪಾರವಾದ ಅನುಗ್ರಹದಿಂದ ನಾನು ಮಕ್ಕಾ ತಲುಪಿದ್ದು ನನ್ನ ಯಾತ್ರೆಯ ಯಶಸ್ಸನ್ನು ನನ್ನ ತಾಯಿಗೆ ಸಮರ್ಪಿಸುತ್ತೇನೆ ಎಂದು ಖಲೀಲ್ ತಿಳಿಸಿದ್ದಾರೆ.
ಕಾಲ್ನಡಿಗೆ ಯಾತ್ರೆ ಮಾಡುತ್ತಿದ್ದ ವೇಳೆ ಆಯಾ ರಾಜ್ಯ, ದೇಶದ ಜನರು ನನಗೆ ಸಂಪೂರ್ಣ ಸಹಕಾರವನ್ನು ನೀಡಿದ್ದರು, ದೇಶದಲ್ಲಿ ಎಲ್ಲರೂ ಶಾಂತಿ, ಸೌಹಾರ್ದತೆಯಿಂದ ಬಾಳುವಂತಾಗಬೇಕು ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ. ಮಕ್ಕಾದಲ್ಲಿ ನಾಲ್ಕು ತಿಂಗಳು ಇದ್ದು ಹಜ್ ಪೂರ್ತಿಗೊಳಿಸಿ ಭಾರತಕ್ಕೆ ವಾಪಸಾಗುವುದಾಗಿ ಅಬ್ದುಲ್ ಖಲೀಲ್
ತಿಳಿಸಿದ್ದಾರೆ.