ರಾಷ್ಟ್ರೀಯ

ಸ್ನೇಹಿತ ಭೇಟಿಯಾಗಲು ಬಂದಿಲ್ಲವೆಂದು ಬೇಸರ: ಪ್ರೀತಿ ಪ್ರೇಮದ ಹುಚ್ಚಾಟಕ್ಕೆ ಇಬ್ಬರು ಬಾಲಕಿಯರು ಬಲಿ

ಇಂದೋರ್‌: ಸ್ನೇಹಿತನಿಗಾಗಿ 16 ವರ್ಷದ ವಿದ್ಯಾರ್ಥಿನಿಯೊಬ್ಬಳು ತನ್ನದೇ ವಯಸ್ಸಿನ ಇನ್ನಿಬ್ಬರು ಆತ್ಮೀಯ ಸ್ನೇಹಿತೆಯರ ಜೊತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಧ್ಯ ಪ್ರದೇಶದ ಇಂದೋರ್‌ ಜಿಲ್ಲೆಯಲ್ಲಿ ನಡೆದಿದೆ. ಈ ಪೈಕಿ ಇಬ್ಬರು ವಿದ್ಯಾರ್ಥಿನಿಯರು ಮೃತ ಪಟ್ಟಿದ್ದಾರೆ. ಮತ್ತೊರ್ವಳ ಸ್ಥಿತಿ ಗಂಭೀರವಾಗಿದೆ.

‘ವಿಷ ಸೇವಿಸಿದ್ದ ಮೂವರು ವಿದ್ಯಾರ್ಥಿನಿಯರ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಇನ್ನೋರ್ವಳ ಸ್ಥಿತಿ ಗಂಭೀರವಾಗಿದೆ. ಆಕೆಗೆ ಎಂ.ವೈ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಹೆಚ್ಚುವರಿ ಸಹಾಯಕ ಪೊಲೀಸ್‌ ಕಮಿಷನರ್‌ ತಿಳಿಸಿದ್ದಾರೆ.

ಘಟನೆ ವಿವರ: ಮೂವರು ವಿದ್ಯಾರ್ಥಿನಿಯರು ಸಹಪಾಠಿಗಳು ಮತ್ತು ಆತ್ಮೀಯ ಸ್ನೇಹಿತರಾಗಿದ್ದರು. ಸೀಹೋರ್‌ ಜಿಲ್ಲೆಯ ಅಶ್ತ ಪಟ್ಟಣದ ಶಾಲೆಯೊಂದರಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಮೃತರ ಪೈಕಿ ಓರ್ವ ವಿದ್ಯಾರ್ಥಿನಿಗೆ ಇಂದೋರ್‌ನಲ್ಲಿ ಸ್ನೇಹಿತನಿದ್ದ. ಆದರೆ ಆತ ಕೆಲವು ದಿನಗಳಿಂದ ಆಕೆಯ ಜೊತೆ ಫೋನ್‌ನಲ್ಲಿ ಮಾತನಾಡುತ್ತಿರಲಿಲ್ಲ. ಇದರಿಂದ ಮನನೊಂದ ವಿದ್ಯಾರ್ಥಿನಿ ಆತನನ್ನು ನೇರವಾಗಿ ಭೇಟಿಯಾಗಲು ಮುಂದಾಗಿದ್ದಾಳೆ. ಶುಕ್ರವಾರ ಬೆಳಿಗ್ಗೆ ಶಾಲೆಗೆ ಹೋಗದೆ ಆತ್ಮೀಯ ಇಬ್ಬರು ಸ್ನೇಹಿತೆಯರ ಜೊತೆ 100 ಕಿ.ಮೀ. ದೂರದ ಇಂದೋರ್‌ಗೆ ಬಸ್‌ ಮೂಲಕ ತೆರಳಿದ್ದಾಳೆ.

ಇಂದೋರ್‌ನಲ್ಲಿ ಸ್ನೇಹಿತ ಸಿಗದಿದ್ದರೆ ತನ್ನಿಬ್ಬರು ಆತ್ಮೀಯ ಸ್ನೇಹಿತೆಯರ ಜೊತೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾಳೆ. ಅಶ್ತಾ ಪಟ್ಟಣದಲ್ಲೇ ವಿಷವನ್ನು ಖರೀದಿಸಿದ್ದಾರೆ. ಬಳಿಕ ಇಂದೋರ್‌ ತಲುಪಿ ಸ್ನೇಹಿತನನ್ನು ಸಂಪರ್ಕಿಸಿದ್ದಾರೆ. ಭವಾರ್‌ಕೌನ್‌ ಪ್ರದೇಶದ ಉದ್ಯಾನವನದಲ್ಲಿ ಆತನ ಬರುವಿಕೆಗಾಗಿ ಮೂವರು ಕಾದು ಕುಳಿತಿದ್ದಾರೆ. ಆತ ಬಾರದೆ ಇದ್ದಾಗ ತೀವ್ರ ಮನನೊಂದು ವಿಷ ಕುಡಿದಿದ್ದಾಳೆ.

ಬಳಿಕ ಮತ್ತೊಬ್ಬ ಸ್ನೇಹಿತೆ ತನ್ನ ಮನೆಯಲ್ಲಿ ಸಾಕಷ್ಟು ಗಂಭೀರ ಸಮಸ್ಯೆಗಳು ಇರುವುದಾಗಿ ಹೇಳಿ ವಿಷವನ್ನು ಕುಡಿದಿದ್ದಾಳೆ. ನಂತರ ಉಳಿದ ಕೊನೆಯ ಸ್ನೇಹಿತೆಯೂ ಆತ್ಮೀಯರನ್ನು ಕಳೆದುಕೊಳ್ಳುತ್ತಿರುವ ದುಃಖದಲ್ಲಿ ವಿಷ ಸೇವಿಸಿದ್ದಾಳೆ.

ಕೊನೆಯಲ್ಲಿ ವಿಷ ಸೇವಿಸಿದ್ದ ವಿದ್ಯಾರ್ಥಿನಿ ಬದುಕುಳಿದ್ದಿದ್ದರಿಂದ ಈ ವಿಚಾರಗಳು ತನಿಖೆಯಲ್ಲಿ ತಿಳಿದು ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಷ ಸೇವಿಸಿದ್ದ ವಿದ್ಯಾರ್ಥಿನಿಯರನ್ನು ಗಮನಿಸಿದ ಸ್ಥಳೀಯರು ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಇಬ್ಬರು ಮೃತಪಟ್ಟಿದ್ದಾರೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್‌ ನೋಟ್‌ ಪತ್ತೆಯಾಗಿಲ್ಲ.

Leave a Reply

Your email address will not be published. Required fields are marked *

error: Content is protected !!