ದಕ್ಷಿಣ ಫಿಲಿಪ್ಪೀನ್ಸ್ನಲ್ಲಿ ಪ್ರವಾಹ, ಭೂಕುಸಿತ: 31 ಮಂದಿ ಸಾವು
ಫಿಲಿಪ್ಪೀನ್ಸ್: ಧಾರಾಕಾರ ಮಳೆಯಿಂದ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದಿಂದಾಗಿ ದಕ್ಷಿಣ ಫಿಲಿಪ್ಪೀನ್ಸ್ ಪ್ರಾಂತ್ಯದಲ್ಲಿ ಕನಿಷ್ಠ 31 ಮಂದಿ ಸಾವಿಗೀಡಾಗಿದ್ದು, ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಗಿಂದನಾವೊ ಪ್ರಾಂತ್ಯದ ಮೂರು ನಗರಗಳಲ್ಲಿ ಸಂತ್ರಸ್ತರು ಪ್ರವಾಹದ ನೀರಿನಲ್ಲಿ ಹಾಗೂ ಮಣ್ಣಿನ ಕುಸಿತದಿಂದ ಕೊಚ್ಚಿ ಹೋಗಿದ್ದಾರೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ಕಳೆದ ರಾತ್ರಿ ಅಧಿಕ ಮಳೆಯಾದ ಕಾರಣದಿಂದ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ಶುಕ್ರವಾರ ಬೆಳಿಗ್ಗೆಯಿಂದ ಪ್ರವಾಹದಲ್ಲಿ ಇಳಿಕೆಯಾಗಿದೆ. ಮೇಯರ್ಗಳು, ಗವರ್ನರ್ಗಳು ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ನೀಡಿದ ವರದಿಗಳ ಆಧಾರದ ಮೇಲೆ, 26 ಮಂದಿ ಮಗಿಂದನಾವೊ ಪ್ರಾಂತ್ಯದ ಕರಾವಳಿ ಪಟ್ಟಣಗಳಾದ ಡಾಟು ಓಡಿನ್ ಸಿನ್ಸುಯಾಟ್ ಮತ್ತು ಡಾಟು ಬ್ಲಾ ಸಿನ್ಸುಯಾಟ್ನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಇತರ ಐದು ಮಂದಿ ಯುಪಿ ಪಟ್ಟಣದಲ್ಲಿ ಸಾವಿಗೀಡಾಗಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.