ರಾಜ್ಯ

ಲೇಖನ | ‘ಸೌಹಾರ್ದತೆ ಮೆರೆದ ನನ್ನೂರಿನ ಮಿಲಾದ್’

  • 🖋 ತಸ್ಮಿಯಾ ರಿಪ್ಪನ್ ಪೇಟೆ, ಶಿವಮೊಗ್ಗ

ಕಳೆದ ಕೆಲವು ವರ್ಷಗಳಿಂದ ನಿಲ್ಲಿಸಲಾಗಿದ್ದ ಈದ್ ಮಿಲಾದ್ ಕಾನ್ಫರೆನ್ಸ್ ಮತ್ತೊಮ್ಮೆ ನನ್ನೂರು ರಿಪ್ಪನ್ ಪೇಟೆಯಲ್ಲಿ ನೆರವೇರಿದದ್ದು ನಮಗೆಲ್ಲ ಹರುಷ ತಂದಿದೆ ಎಂದು ಹೇಳಬಹುದು.


ಕೋವಿಡ್ ಎಂಬ ಮಾರಕ ರೋಗ ಸಮಾಜವನ್ನು ತತ್ತರಿಸಿ ಜನರ ಸಂಭ್ರಮವನ್ನೇ ಬಲಿತಗೆದು ಕೊಂಡಿದ್ದ ಮಹಾಮಾರಿ ಇಂದು ನಮ್ಮನ್ನಗಲಿದೆ ಎಂಬ ಭಾವ. ಕೋವಿಡ್ ಬೀಸಿದ ಬಲೆಯಿಂದ ತಪ್ಪಿಸಿಕೊಂಡು ಆಚೆ ಬರಲು ಎರಡು ಮೂರು ವರ್ಷವೇ ಬೇಕಾಯಿತು. ಅಂದರೆ ಸಂಪೂರ್ಣವಾಗಿ ಅದರಿಂದ ಹೊರಬಂದಿದ್ದೀವಿ ಎಂದೇಳಿದರೆ ತಪ್ಪಾಗುತ್ತದೆ. ಆದರೆ ಕಳೆದ ಎರಡೂ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪರವಾಗಿಲ್ಲ. ಕಳೆದು ಹೋದ ಸಂತೋಷ ಸಡಗರ ಈ ವರ್ಷ ತಂದು ಕೊಟ್ಟಿದೆ ಅದಕ್ಕೆ ಕೃತಜ್ಞತೆಗಳು.

ರಿಪ್ಪನ್ ಪೇಟೆಯ ಈದ್ ಮಿಲಾದ್ ಅಂದರೆ ನಮ್ಮ ಪಾಲಿಗೆ ಅದೊಂದು “it is not only a festival, it’s an emotion for us”. ಹುಟ್ಟಿದಾಗಿಂದ ಇಲ್ಲೆ ಬೆಳೆದು ಇಲ್ಲೇ ಕಲಿತು ಬಂದಂತಹ ನಮ್ಮಂತವರಿಗೆ ನಮ್ಮೂರಿನ ಮಿಲಾದ್ ಎಂದರೆ ಬಕ್ರೀದ್, ರಂಝಾನ್ ಹಬ್ಬಕ್ಕಿಂತಲೂ ಹೆಚ್ಚಿನ ಸಂಭ್ರಮ ತಂದು ಕೊಡುತ್ತದೆ. ಇದರ ತಯಾರಿ ಹೇಗೆ ನಡೆಯುತ್ತದೆ ಎಂದರೆ ನಮ್ಮ ಊರಿನ ಯುವಕರು ಈದ್ ಮಿಲಾದ್ ಎಂದ ತಕ್ಷಣ ನಿದ್ದೆಯಲ್ಲಿ ಬೆಚ್ಚಿಬೀಳುವ ಹಾಗೆ ಚುರುಕಾಗ ತೊಡಗುತ್ತಾರೆ. ತಮ್ಮೆಲ್ಲಾ ಖಾಸಗಿ ಕೆಲಸಗಳಿಗೆ ರಜೆ ತೆಗೆದು ತಮ್ಮ ಮನೆಯನ್ನು ತಿಂಗಳ ಮುಂಚೆಯೇ ಮರೆತು ಬಿಡುತ್ತಾರೆ. ಮಸೀದಿಯನ್ನು ಅಲಂಕರಿಸುದಲ್ಲದೆ ಊರನ್ನೇ ಹುಣ್ಣಿಮೆ ಬೆಳಕಂತೆ ಅಲಂಕರಿಸುವಲ್ಲಿ ನಿರತರಾಗಿ ರಾತ್ರಿ ಹಗಲು ಊಟ ತಿಂಡಿ ನಿದ್ದೆ ಎಲ್ಲವನ್ನೂ ನೆಬಿ ದಿನಕ್ಕಾಗಿ ಮುಡಿಪಾಗಿಡುವಲ್ಲಿ ನಮ್ಮ ಊರಿನ ಸಹೋದರರು ಒಂದು ಕೈ ಮೇಲೆ ಎಂದು ಹೇಳಲು ಹೆಮ್ಮೆ ಇದೆ.

ನಾಲಕ್ಕು ದಿನದ ಕಾರ್ಯಕ್ರಮ, ಇಡೀ ಊರನ್ನೇ ಬೆರಗಿನಿಂದ ನೋಡುವ ಹಾಗೆ ಮಾಡಿದೆ. ಯಾಕೆಂದರೆ ಮುತ್ತಿನ ಮಣಿಗಳಲ್ಲಿ ಪೋಣಿಸಿದ ಹಾರದಂತೆ ಕಂಗೊಳಿಸುತ್ತಿತ್ತು ದೀಪದ ಅಲಂಕಾರ‌. ಮಸೀದಿಗೆ ಹೊದಿಸಲ್ಪಟ್ಟಂತಹ ಬಿಳಿ ಬಣ್ಣದ ದೀಪಾಲಂಕಾರ ನೋಡುವವರ ಕಣ್ಣಿಗೆ ಹಬ್ಬ ಆಗಿದ್ದಲ್ಲದೆ ಊರಿನವರ ಮನಸೆಳೆಯುವಂತಿತ್ತು. ಇದಕ್ಕೆಲ್ಲಾ ಮುಖ್ಯ ಕಾರಣ ಯುವ ಸಮೂಹ ಮತ್ತು ಈ ಊರಿನ ಹಿರಿಯರು. ಈ ಸಂಭ್ರಮದಲ್ಲಿ ಹೆಚ್ಚಿನ ಪಾತ್ರ ರಾತ್ರಿ ಹಗಲನ್ನು ಲೆಕ್ಕಿಸದೆ ದುಡಿದ ಯುವ ಸಮೂಹದ್ದೆ ಆಗಿದೆ .

ಅವರ ಪಾತ್ರ ಮರೆಯುವಂತದಲ್ಲ. ಎರಡು ಮೂರು ವರ್ಷದ ಬಳಿಕ ನಡೆದ ಮಿಲಾದ್ ಸಂಭ್ರಮವನ್ನು ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎಲ್ಲಾ ವರ್ಗದ ಹಿರಿಯರು ಸೇರಿ “ಇಲಲ್ ಹಬೀಬ್ ಮಿಲಾದ್ ಕಾನ್ಫರೆನ್ಸ್” ವೇದಿಕೆಯನ್ನು ಉದ್ಘಾಟಿಸಿ, ಸೌಹಾರ್ದತೆಯನ್ನು ಸಾರಿದ್ದಾರೆ. ಅದನ್ನು ದೂರದಲ್ಲಿ ಕುಳಿತು ಕಂಡ ನಮ್ಮ ಮನಸ್ಸಿಗೆ ಹಿತ ತಂದಿದೆ.

ಜಾತಿ ಬೇಧ ಪಂಗಡಗಳ ಜಂಜಾಟದಲ್ಲಿ ಮುಳುಗಿರುವ ನಮ್ಮ ಸಮಾಜದಲ್ಲಿ ಅಪರೂಪಕ್ಕೆ ಇಂತಹ ಸೌಹಾರ್ದತೆಯನ್ನು ಅಲ್ಲಲ್ಲಿ ಕಂಡರೆ ಏನೋ ಒಂದು ಅಭಿಮಾನ ಉಕ್ಕುತ್ತದೆ. ಭಾವೈಕ್ಯತಾ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿದ್ದಂತಹ ಫಾದರ್ ವೀರೇಶ್ ವಿ. ಮೋರಸ್ ರವರು ಸ್ಪಷ್ಟವಾಗಿ ಸಾರಿದ ಸೌಹಾರ್ದತೆಯ ಮಾತಿನ ತುಣುಕುಗಳು ಈಗಲೂ ನಮ್ಮ ಕಿವಿಗಳಲ್ಲಿ ಪ್ರತಿದ್ವನಿಸುತ್ತಿದೆ. ಮಾತಿನ ನಡುವೆ ವೇದಿಕೆಯಲ್ಲಿ ಹೀಗೊಂದು ಸುಂದರ ಕವನ ನಮ್ಮ ಮುಂದಿಟ್ಟಿದ್ದರು….

“ಮಸೀದಿಯ ಮಿನಾರದಲ್ಲಿ ಗೂಡು ಕಟ್ಟಿದ ಪಾರಿವಾಳ
ಪಕ್ಕದ ಮಂದಿರದಲ್ಲಿ ಧಾನ್ಯ
ಕಾಳು ಹೆಕ್ಕಿ ತಿನ್ನುತ್ತಿತ್ತು!!!”

“ಮುಸ್ಲಿಂ ಸಹೋದರರು
ತಿಂದು ಬಿಸಾಡಿದ ಮಾಂಸದ ಎಲುಬನ್ನು ತಿಂದ ಬೆಕ್ಕು..
ದೇವಸ್ಥಾನದ ಪುರೋಹಿತ
ಕೊಟ್ಟ ಹಾಲನ್ನು ಕುಡಿಯುತ್ತಿತ್ತು”

“ಚರ್ಚು ಗೋಪುರದ
ಮಹಡಿಯಲ್ಲಿ ಗೂಡು ಕಟ್ಟಿದ
ಗುಬ್ಬಚ್ಚಿ , ಮಸೀದಿಯ ಬಾವಿಯ ನೀರನ್ನು ಕುಡಿಯುತ್ತಿತ್ತು”

“ಆದರೆ ಇವುಗಳ ಮಧ್ಯೆ
ಪರಸ್ಪರ ಯಾವುದೇ ಸಂಬಂಧ
ಇಲ್ಲವೇನು ಎನ್ನುವಂತೆ ವರ್ತಿಸುವ
ಮನುಜ ಮಾತ್ರ ನಾನು ಮೇಲು
ನಾನು ಮೇಲು ಎಂದು ಪರಸ್ಪರ
ಕಚ್ಚಾಡುತ್ತಿದ್ದಾನೆ. ಓ ಮನುಜ
ಪ್ರಾಣಿ ಪಕ್ಷಿಗಳಿಗೆ ಇಲ್ಲದ ಈ
ಭೇದ ಭಾವ ನಿನಗೆ
ತಂದುಕೊಟ್ಟವರಾರು? .
ಎಂತಹ ಅರ್ಥಭರಿತವಾದಂತಹ ಸಾಲು.

ಧರ್ಮಗಳ ಹೆಸರಿನಲ್ಲಿ ಸಮಾಜದ ಶಾಂತಿ ಕದಡುತ್ತಿರುವವರ ಮುಂದೆ ಐಕ್ಯತೆ ಯನ್ನು ಸಾರುವುದು ಪ್ರತಿ ಒಬ್ಬ ಪ್ರಜೆಯ ಕರ್ತವ್ಯವೆಂದೇ ಹೇಳಬಹುದು. ನಮ್ಮ ನಮ್ಮ ಧರ್ಮವನ್ನು ಆಳವಾಗಿ ಕಲಿತು, ಅದರಲ್ಲಿನ ಸತ್ವವನ್ನು ಬುಡದಿಂದಲೇ ಅರಿತು, ಅದರ ಮೂಲಕ ನಮ್ಮ ಜೀವನವನ್ನು ರೂಪಿಸಿಕೊಂಡು ಇತರೆ ಧರ್ಮವನ್ನು ಗೌರವಿಸುವುದೇ ಬುದ್ಧಿವಂತರ ಲಕ್ಷಣ ಎಂದು ಫಾದರ್ ವೀರೇಶ್. ವಿ‌.ಮೋರಸ್ ರವರು ಅಲ್ಲಿ ನೆರೆದಿದ್ದ ಎಲ್ಲಾ ಧರ್ಮದವರಿಗೂ ಮಾನವೀಯ ಧರ್ಮ ಶ್ರೇಷ್ಠ ಎಂದು ಮಾನವೀಯತೆಯನ್ನು ಹೇಳಿ ಕೊಟ್ಟರು.
ಹಾಗೆ ಮಸೀದಿಯ ದರ್ಸ್ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲು ಜಾತಿ ಧರ್ಮ ವನ್ನು ನೋಡದೆ ಸಹಕರಿಸಿದವರು ಒಬ್ಬ ಹಿಂದೂ ದಾನಿಯಾಗಿದ್ದಾರೆ ಎಂಬುವುದು ಹೆಮ್ಮೆ ವಿಷಯ. ಅವರಂತೆ ಸೌಹಾರ್ದತೆಯ ಮೀಲಾದಿಗೆ ಸಹಾಯದನ ನೀಡಿರುವ ನಮ್ಮ ಊರಿನ ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಇನ್ನೂ ಅನೇಕ ವಿಶಾಲ ಮನಸ್ಸಿನ ಜನರು ನಮ್ಮ ನಡುವೆ ಇದ್ದಾರೆ ಎನ್ನುವುದೇ ಸಂತಸದ ಸುದ್ದಿ.


ಕೊರೋನ ಸಮಾಜಕ್ಕೆ ಒಳ್ಳೆಯ ಪಾಠವನ್ನು ಕಲಿಸಿ ಹೋಗಿದೆ ಮತ್ತು ಜಾತಿ ಧರ್ಮಕ್ಕಿಂತಲು ಮಾನವ ಧರ್ಮ, ಮಾನವೀಯತೆಯೇ ಮೇಲು ಎಂಬುವುದು ಅರ್ಥೈಸಿದೆ.
ಹಾಗೆ ಮೊಹಿಯದ್ದಿನ್ ಜುಮ್ಮಾ ಮಸೀದಿಯ ಧರ್ಮ ಗುರುಗಳಾದ “ಮುನೀರ್ ಸಖಾಫಿ” ಯವರು ಯುವ ಸಮೂಹ ಮುಂದಿನ ಪೀಳಿಗೆಗೆ ಹೇಗೆ ಮಾದರಿ ಆಬಗೇಕೆನ್ನುವುದನ್ನು ತಿಳಿಸುತ್ತಾ ನಮ್ಮ ಊರಿನ ಅನ್ಯೋನ್ಯತೆ ಯನ್ನು ಹೊಗಳಿ ಯಾವ ಧರ್ಮದ ಭಾವನೆಗಳಿಗೂ ಧಕ್ಕೆ ಆಗದಂತೆ ನೀತಿ ಪಾಠ ಹೇಳಿ ಕೊಟ್ಟು “ಭಾರತ ದೇಶದ ಪ್ರಜೆಗಳು ನಾವು” ಎಂಬ ವಾಕ್ಯದೊಂದಿಗೆ ಒಗ್ಗಟ್ಟಿನ ಬಲವನ್ನು ಸಾರಿದರು.

ಇಂತಹ ಹೃದಯಸ್ಪರ್ಶಿ ಕಾರ್ಯಕ್ರಮದಲ್ಲಿ
ಎಲ್ಲಾ ಧರ್ಮದ ಜನರಿಗೂ ಆಹ್ವಾನ ನೀಡಿದ್ದು ಎಲ್ಲರಿಗೂ ಮಾತನಾಡುವ ಅವಕಾಶವು ಅಲ್ಲಿ ಕಲ್ಪಿಸಿ ಕೊಟ್ಟಿರುವುದು ನಿಜಕ್ಕೂ ಊರಿಗೆ ಸಂತೋಷದ ಸಂಗತಿ .

ಹೀಗೆ ಸರ್ವಜನಾಂಗದ ಶಾಂತಿಯ ತೋಟವಾಗಿರಲಿ ನಮ್ಮ ಸಮಾಜ.
ಈ ಸೌಹಾರ್ದತೆ ಈ ಭೂಮಿಯ ಚಲನ ನಿಲ್ಲುವ ತನಕ ಹೀಗೆ ಇರಲಿ ಎಂದು ಆಶಿಸುತ್ತ ಈ ವರ್ಷದ ಈದ್ ಮಿಲಾದ್ ಕಾರ್ಯಕ್ರಮ ಅರ್ಥಪೂರ್ಣವಾಗಿ ಮುಗಿಯಿತು. ಹೀಗೆ ಸೌಹಾರ್ದ ಸಮ್ಮಿಲನಕ್ಕೆ ಸಾಕ್ಷಿಯಾದ ದೀಪಲಂಕಾರ ನೋಡಿದವರ ಹೃದಯದಲ್ಲಿ ಸುಂದರ ನೆನಪಾಗಿ ಉಳಿಯಿತು.

Leave a Reply

Your email address will not be published. Required fields are marked *

error: Content is protected !!