ಶಕುಂತಳಾ ಶೆಟ್ಟಿ ಪಕ್ಷ ಬದಲಾಯಿಸಿದರೂ ಮನಸ್ಸು ಬದಲಾಯಿಸಲಿಲ್ಲ: ಇಸಾಕ್ ಸಾಲ್ಮರ
ಪುತ್ತೂರು; ಬಿಜೆಪಿಯಿಂದ ಕಾಂಗ್ರೆಸ್‌ಗೆ ಪಕ್ಷಾಂತರ ಗೊಂಡ ಮಾಜಿ ಶಾಸಕಿ ಪಕ್ಷಾಂತರವಾಗಿದ್ದಾರೆಯೇ ಹೊರತು ಅವರ ಮನಸ್ಸು ಸಂಘಪರಿವಾರದಲ್ಲೇ ಇದೆ, ಕೋಮುವಾದವನ್ನು ತನ್ನ ಬಗುಲಲ್ಲೇ ಇಟ್ಟುಕೊಂಡಿದ್ದಾರೆ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಹಿರಿಯ ಮುಖಂಡ ಇಸಾಕ್ ಸಾಲ್ಮರ ಆರೋಪಿಸಿದರು.
ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಕುಂತಳಾ ಶೆಟ್ಟಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರಿಕೊಂಡರೂ ಅವರನ್ನು ನಾವೆಲ್ಲರೂ ಒಗ್ಗಟ್ಟಾಗಿ ಗೆಲ್ಲಿಸಿದ್ದೆವು. ಗೆದ್ದ ಬಳಿಕ ಅವರು ಅಲ್ಪಸಂಖ್ಯಾತ ವಿರೋಧಿಯಾಗಿಯೇ ಮುಂದುವರೆದಿದ್ದರು. ಅವರ ಅವದಿಯಲ್ಲಿ ಅಲ್ಪಸಂಖ್ಯಾತರಿಗಾಗಿ ಏನೂ ಮಾಡಿಲ್ಲ. ಕಾಂಗ್ರೆಸ್ ಎಲ್ಲಾ ಜಾತಿ, ಧರ್ಮಗಳನ್ನು ಒಳಗೊಂಡ ಪಕ್ಷವಾಗಿದೆ. ಶಕುಂತಳಾ ಶೆಟ್ಟಿಯವರು ಕೋಮುವಾದಿಯಾಗಿಯೇ ಮುಂದುವರೆದಿದ್ದಾರೆ ಎಂದರು.
ಕಳೆದ ಬಾರಿ ಎನ್‌ಆರ್‌ಸಿಸಿ ವಿರೋಧಿ ಸಭೆಯಲ್ಲಿ ಗೈರಾಗಿದ್ದರು, ಟಿಪ್ಪು ಜಯಂತಿಗೂ ಗೈರಾಗಿದ್ದರು ಆ ವೇಳೆಯೇ ಅವರ ಒಳಮನಸ್ಸು ಜನರಿಗೆ ಅರ್ಥವಾಗಿತ್ತು. ಕಳೆದ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಆಯುಧ ಪೂಜೆಯಲ್ಲಿ ಆರೆಸ್ಸೆಸ್ ಮುಖಂಡ ಪುರೋಹಿತರಿಂದ ಪೂಜೆ ಮಾಡಿಸಿದ್ದಾರೆ. ಹೋದಲ್ಲಿ ಬಂದಲ್ಲಿ ಅವರು ಅಲ್ಪಸಂಖ್ಯಾತ ವಿರೋಧಿಯಾಗಿಯೇ ನಡೆದುಕೊಳ್ಳುತ್ತಿದ್ದಾರೆ. ಪುತ್ತೂರಿನಲ್ಲಿ 46 ಸಾವಿರ ಅಲ್ಪಸಂಖ್ಯಾತ ಮತಗಳಿದ್ದು ನಿರ್ಣಾಯಕ ಮತಗಳಾಗಿದೆ. ಶಕುಂತಳಾ ಶೆಟ್ಟಿಯವರು ಕೋಮು ದ್ವೇಷದ ಬಗ್ಗೆ ನಾವು ಕೆಪಿಸಿಸಿಗೆ ದೂರು ನೀಡುವುದಾಗಿ ಇಸಾಕ್ ಸಾಲ್ಮರ ತಿಳಿಸಿದರು.