ಪುತ್ತೂರಿನ ಡಾ. ಶಿವರಾಮ ಭಟ್ ಕ್ಲಿನಿಕ್ ಬಂದ್
ಪುತ್ತೂರು ಹೃದಯ ಭಾಗದಲ್ಲಿದ್ದ ಶಿವರಾಮ ಭಟ್ ಕ್ಲಿನಿಕ್ ಬಂದ್ ಮಾಡಲಾಗಿದೆ. ಕಾಂಪೌಂಡರ್ ನರಸಿಂಹ ಭಟ್ ವೃತ್ತಿಗೆ ವಿದಾಯ ಹೇಳಿರುವುದೇ ಕ್ಲಿನಿಕ್ ಬಂದ್ ಆಗಲು ಕಾರಣ. ಜ್ವರ, ಶೀತ , ಕೆಮ್ಮು ಮೊದಲಾದ ಮಾಮೂಲಿ ಅನಾರೋಗ್ಯದ ವೇಳೆ ಡಾ. ಶಿವರಾಂ ಭಟ್ ಅವರ ಕಾಂಪೌಂಡರ್ ನೀಡುತ್ತಿದ್ದ ಮೂರು ಹೊತ್ತಿನ ಮದ್ದಿನಲ್ಲಿ ಎಲ್ಲವೂ ಗುಣವಾಗುತ್ತಿತ್ತು. ಕಡಿಮೆ ಮೊತ್ತದಲ್ಲಿ ಔಷಧಿ. ಆದರೆ ಅದೆಲ್ಲವೂ ಇನ್ನು ನೆನಪು ಮಾತ್ರ.
ಕಾಂಪೌಂಡರ್ ಆಗಿ ಸುಮಾರು 68 ವರ್ಷಗಳ ಸೇವೆಯ ನಂತರ ಕೆಲಸಕ್ಕೆ ವಿದಾಯ ಹೇಳಿರುವ ನರಸಿಂಹ ಭಟ್ ಜನರಿಗೆ ನಿರಾಶ ತಂದಿದೆ. ತನ್ನ 16ನೇ ವಯಸ್ಸಿಗೆ ಪುತ್ತೂರಿನ ಡಾ. ಶಿವರಾಂ ಭಟ್ ಅವರಲ್ಲಿ ಕಾಂಪೌಂಡರ್ ಆಗಿ ಕೆಲಸಕ್ಕೆ ಸೇರಿಕೊಂಡ ನರಸಿಂಹ ಭಟ್ ಅವರಿಗೆ ಈಗ 82 ವರ್ಷ.
ಕಂಪೌಂಡರ್ ನರಸಿಂಹ ಭಟ್ ಮದ್ದು ನೀಡಿದರೆಂದರೆ ರೋಗ ವಾಸಿಯಾಗಲೇಬೇಕು. ನಗುವಿನೊಂದಿಗೆ ಕಡಿಮೆ ಹಣ ಪಡೆದು ಅವರು ನೀಡುವ ಮದ್ದಿನಿಂದ ಬಹುತೇಕ ರೋಗಗಳು ಗುಣ ಆಗುತ್ತಿತ್ತು.ಎಲ್ಲಾ ರೋಗಗಳಿಗೂ ಸಂಜೀವಿನಿಯಾಗಿತ್ತು. ಡಾ.ಶಿವರಾಮ ಭಟ್ ಅವರ ನಿಧನದ ಬಳಿಕವೂ ಅವರ ಹೆಸರಿನಲ್ಲಿ ಕ್ಲಿನಿಕ್ ಅನ್ನು ಮುಂದುವರಿಸಿಕೊಂಡು ಹೋಗಿದ್ದರು. ಈಗ ಕ್ಲಿನಿಕ್ಕಿಗೆ ಬೀಗ ಹಾಕಿದ್ದು ಶಿವರಾಮ ಭಟ್ ಕ್ಲಿನಿಕ್ ಬಂದ್ ಮಾಡಲಾಗಿದೆ
ಎಂಬ ಬೋರ್ಡ್ ನೇತು ಹಾಕಲಾಗಿದೆ.
ಹಾರಾಡಿಯಲ್ಲಿ ತಮ್ಮ ಪತ್ನಿ ಸರಸ್ವತಿ ಅವರೊಂದಿಗೆ ವಿಶ್ರಾಂತ ಜೀವನ ನಡೆಸುತ್ತಿರುವ ನರಸಿಂಹ ಭಟ್, ಅವರ ಪುತ್ರ ಕಾರ್ತಿಕ್ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು ಪತ್ನಿ ಮಗನೊಂದಿಗೆ ಲಂಡನ್ ನಲ್ಲಿ ನೆಲೆಸಿದ್ದಾರೆ.