ಪಟಾಕಿ ಸಂಗ್ರಹಿಸಲಾಗಿದ್ದ ಗೋಡೌನ್‌ನಲ್ಲಿ ಸ್ಫೋಟ – ನಾಲ್ವರು ಸಾವು
ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಬನ್ಮೋರ್ ನಗರದಲ್ಲಿ ಗುರುವಾರ ಗೋಡೌನ್‌ನಲ್ಲಿ ಪಟಾಕಿ ಸಂಗ್ರಹಿಸಲಾಗಿದ್ದ ಮನೆಯೊಂದರಲ್ಲಿ ಬೀಕರ ಸ್ಫೋಟ ಸಂಭವಿಸಿ ನಾಲ್ವರು ಸಾವನ್ನಪ್ಪಿದ್ದು, ಹಲವು ಮಂದಿ ಅವಶೇಷಗಳಡಿಯಲ್ಲಿ ಹೂತುಹೋಗಿರುವ ಶಂಕೆ ವ್ಯಕ್ತವಾಗಿದೆ.
ದೀಪಾವಳಿಗೆ ಮುಂಚಿತವಾಗಿ ಪಟಾಕಿಗಳಿಂದ ತುಂಬಿದ್ದ ಗೋಡೌನ್ ಸ್ಫೋಟಿಸಿದ್ದು ಏಳು ಮಂದಿ ಗಾಯಗೊಂಡಿದ್ದಾರೆ.
“ನಾವು ಸ್ಫೋಟಕ್ಕೆ ಗನ್‌ಪೌಡರ್ ಕಾರಣವೇ ಅಥವಾ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಸಂಭವಿಸಿದೆಯೇ ಎಂಬುದರ ಕುರಿತು ನಾವು ತನಿಖೆ ನಡೆಸುತ್ತಿದ್ದೇವೆ. ಎಲ್ಲಾ ಗಾಯಾಳುಗಳು ಗಂಭೀರರಾಗಿದ್ದಾರೆ; ಅವರಿಗೆ ತೀವ್ರ ಸುಟ್ಟ ಗಾಯಗಳಾಗಿವೆ” ಎಂದು ಮೊರೆನಾ ಕಲೆಕ್ಟರ್ ಬಕ್ಕಿ ಕಾರ್ತಿಕೇಯನ್ ಹೇಳಿದ್ದಾರೆ.
ಅವಶೇಷಗಳನ್ನು ತೆರವುಗೊಳಿಸಲು ಯಂತ್ರಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪೊಲೀಸರು ಮತ್ತು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ ಎಂದು ಪೊಲೀಸ್ ಮಹಾನಿರೀಕ್ಷಕ ರಾಜೇಶ್ ಚಾವ್ಲಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮೂರು ವರ್ಷಗಳ ಹಿಂದೆ ಪಂಜಾಬ್‌ನಲ್ಲಿ ಇದೇ ರೀತಿಯ ಘಟನೆಯಲ್ಲಿ, ದೀಪಾವಳಿಯ ದಿನಗಳ ಮೊದಲು ಬಟಾಲಾದಲ್ಲಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 20 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.