ಸುರತ್ಕಲ್ ಟೋಲ್‌ಗೇಟ್‌ನಲ್ಲಿ ಪ್ರತಿಭಟನೆ ನಡೆಸಿದ್ದ ಹೋರಾಟಗಾರರ ಮೇಲೆ ಕೇಸ್ ದಾಖಲು
ಮಂಗಳೂರು: ವಿವಾದಾತ್ಮಕವಾಗಿರುವ ಸುರತ್ಕಲ್ ಎನ್‌ಐಟಿಕೆ ಟೋಲ್‌ಗೇಟ್ ಮುಚ್ಚಿಸಿಯೇ ಸಿದ್ಧ ಎಂದು ಹೋರಾಟಕ್ಕೆ ಧುಮುಕಿ, ಅಕ್ಟೋಬರ್ 18ರಂದು ಬೃಹತ್ ಪ್ರತಿಭಟನೆ ನಡೆಸಿದ್ದ ಹೋರಾಟಗಾರರ ಮೇಲೆ ಇದೀಗ ಸುರತ್ಕಲ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ.
ಸುಮಾರು ಸಾವಿರಕ್ಕೂ ಅಧಿಕ ಮಂದಿ ಮಂಗಳವಾರದಂದು ಟೋಲ್‌ಗೇಟ್ ಬಳಿ ಜಮಾಯಿಸಿ ಬೃಹತ್ ಪ್ರತಿಭಟನೆ ಮಾಡಿದ್ದರು.
ರಾಷ್ಟ್ರೀಯ ಹೆದ್ದಾರಿಯನ್ನು ಯಾವುದೇ ಕಾರಣಕ್ಕೂ ಬಂದ್ ಮಾಡಬಾರದು ಎನ್ನುವ ನಿಯಮ ಇದ್ದರೂ ಕೂಡಾ ಬಲವಂತವಾಗಿ ಪ್ರತಿಭಟನೆ ನಡೆಸಿ ಹೆದ್ದಾರಿಗೆ ತಡೆಯೊಡ್ಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹೀಗಾಗಿ ಹೋರಾಟಗಾರರ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಟೋಲ್ ಸಂಗ್ರಹ ಏಜನ್ಸಿ ಹಾಗೂ ಎನ್ ಎಂ ಪಿಸಿ ಆರ್ ಸಿಎಲ್ ಇದರ ಪ್ರಾಜೆಕ್ಟ್ ಡೈರೆಕ್ಟರ್ ಅವರು ಪ್ರತ್ಯೇಕ ಎರಡು ದೂರು ದಾಖಲಿಸಿದ್ದಾರೆ.
ಸುಮಾರು 20ರಿಂದ 25ಕ್ಕೂ ಅಧಿಕ ಮಂದಿ ಟೋಲ್‌ಗೇಟ್ ವಿರೋಧಿ ಹೋರಾಟಗಾರರು, ಸಮಿತಿಯ ಅಪರಿಚಿತ ಮಂದಿ ಟೋಲ್‌ಗೇಟ್ ಮುಂಭಾಗದಲ್ಲಿ ಅಕ್ರಮ ಕೂಟ ಸೇರಿ ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಲಾಗಿದೆ.
ಭಾರತೀಯ ದಂಡ ಸಂಹಿತೆ ಐಪಿಸಿ ಸೆಕ್ಷನ್ 143, 147, 341, 283, 149ನಡಿ ಪ್ರಕರಣ ದಾಖಲಿಸಲಾಗಿದೆ.