ಕ್ರೈಂ

ಉತ್ತರ ಪ್ರದೇಶ: ಶಿಕ್ಷಕಿ ಮೇಲೆ ಸಾಮೂಹಿಕ ಅತ್ಯಾಚಾರ

ಲಖನೌ: ಶಿಕ್ಷಕಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎನ್ನಲಾದ ಘಟನೆಯು ಉತ್ತರ ಪ್ರದೇಶ ರಾಜಧಾನಿ ಲಖನೌನಲ್ಲಿ ನಡೆದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಶಿಕ್ಷಕಿಯು ಇಲ್ಲಿಯ ಚಿನ್ಹಾಟ್‌ ಪ್ರದೇಶದಲ್ಲಿ ಶನಿವಾರ ಟ್ಯೂಷನ್‌ ತರಗತಿ ನೀಡಿ ಮನೆಗೆ ಆಟೊದಲ್ಲಿ ವಾಪಸ್ಸಾಗುತ್ತಿದ್ದರು. ಆಗ ಆಟೊ ಚಾಲಕ ಅವರನ್ನು ಮಾಲ್‌ ಹಿಂಬದಿ ಜನರಿಲ್ಲದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಚಾಲಕ ಮತ್ತು ಆಟೊದಲ್ಲಿ ಕುಳಿತಿದ್ದ ಮತ್ತೊಬ್ಬ ವ್ಯಕ್ತಿ ಶಿಕ್ಷಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.

‘ಭಾರವಾದ ವಸ್ತು ಬಳಿಸಿ ನನಗೆ ಅವರು ಬಲವಾಗಿ ಹೊಡೆದರು. ಬಳಿಕ ಪ್ರಜ್ಞಾಹೀನಳಾಗಿದ್ದೆ. ಗೋಮ್ತಿ ನಗರದಲ್ಲಿ ನನ್ನನ್ನು ಬಿಟ್ಟು ಹೋಗಿದ್ದರು. ಘಟನೆ ನಡೆದ ರಾತ್ರಿಯೇ ದೂರು ದಾಖಲಿಸುವ ಸಲುವಾಗಿ ಮೂರು ಪೊಲೀಸ್‌ ಠಾಣೆಗಳು ಮತ್ತು ಒಂದು ಪೊಲೀಸ್‌ ಹೊರಠಾಣೆಗೆ ಹೋಗಿದ್ದೆ. ಆದರೆ ಎಲ್ಲಿಯೂ ದಾಖಲಿಸಿಕೊಳ್ಳಲಿಲ್ಲ’ ಎಂದು ಶಿಕ್ಷಕಿ ಹೇಳಿದ್ದಾರೆ.

ಈ ಘಟನೆ ಕುರಿತ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಬಳಿಕ ಎಫ್‌ಐಆರ್‌ ದಾಖಲಿಸಲಾಗಿದೆ. ದೂರು ದಾಖಲಿಸದ ಕಾರಣಕ್ಕಾಗಿ ಪೊಲೀಸ್‌ ಹೊರ ಠಾಣೆಯ ಉಸ್ತುವಾರಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಮತ್ತು ಇತರ ಮೂರು ಪೊಲೀಸ್‌ ಠಾಣೆಗಳ ಹಿರಿಯ ಪೊಲೀಸರಿಗೆ ಶೋಕಾಸ್‌ ನೋಟಿಸ್‌ ನೀಡಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸಂತ್ರಸ್ತೆಯ ದೇಹದ ಮೇಲೆ ಗಾಯದ ಕಲೆಗಳಿವೆ. ಮೊಕದ್ದಮೆಗೆ ಸಂಬಂಧಿಸಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಮತ್ತೊಬ್ಬನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!