ಕರಾವಳಿಕ್ರೈಂ

ಗಂಡನನ್ನು ಮುಗಿಸಲು ಖತರ್ನಾಕ್ ಪ್ಲ್ಯಾನ್ ರೂಪಿಸಿದ್ದ ರೀಲ್ಸ್ ರಾಣಿ



ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರಿನಲ್ಲಿ ಪ್ರಿಯಕರನ ಜೊತೆ ಸೇರಿ ಪತಿಗೆ ಸ್ಲೋ ಪಾಯಿಸನ್ ನೀಡಿ ಪತ್ನಿ ಕೊಲೆ ಮಾಡಿರುವ ಘಟನೆಗೆ ಸಂಬಂಧಿಸಿ ಅನೇಕ ಬೆಚ್ಚಿ ಬೀಳಿಸುವ ವಿಷಯಗಳು ಹೊರ ಬರುತ್ತಿದೆ.

ತನ್ನ ಗಂಡ ಬಾಲಕೃಷ್ಣ ಅವರನ್ನು ಪತ್ನಿ ಪ್ರತಿಮಾ ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆ ಜೊತೆ ಸೇರಿ ಕೊಲೆ ಮಾಡಿದ್ದು ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅರುಣ್‌ ಕೆ ಅವರು ಮೃತ ಬಾಲಕೃಷ್ಣ ಅವರ ಕೊಲೆ ಕುರಿತಂತೆ ತೀವ್ರಗತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಗಂಡನ ಹತ್ಯೆಯನ್ನು ಪ್ರತಿಮಾ ತನ್ನ ಸಹೋದರನ ಬಳಿ ಒಪ್ಪಿಕೊಂಡಿದ್ದು, ಅವರದ್ದು ಎನ್ನಲಾದ ಆಡಿಯೋ ಕೂಡ ವೈರಲ್ ಆಗಿದೆ. ಮಾತ್ರವಲ್ಲದೆ ಎಲ್ಲಾ ದುಷ್ಟ ಕೃತ್ಯವನ್ನು ಪೊಲೀಸರ ಮುಂದೆ ಪ್ರತಿಮಾ ಹೇಳಿದ್ದಾಳೆ ಎಂದು ತಿಳಿದು ಬಂದಿದೆ.


ಪತಿ ಬಾಲಕೃಷ್ಣರನ್ನು ಕೊಲ್ಲಲು ಮೊದಲೇ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದ ಪ್ರತಿಮಾ ಪ್ರತಿನಿತ್ಯ ಊಟದಲ್ಲಿ ಸ್ಲೋ ಪಾಯ್ಸನ್ ಕೊಟ್ಟು ಸಾಯಿಸೋಣ ಎಂದು ಪ್ಲಾನ್ ಮಾಡಿಕೊಂಡಿದ್ದಳು. ಇದಕ್ಕೆ ಪ್ರಿಯಕರ ದಿಲೀಪ್ ಉಡುಪಿಯಿಂದ ವಿಷ ಪದಾರ್ಥ ತಂದು ಕೊಟ್ಟಿದ್ದ ಎನ್ನಲಾಗಿದೆ. ಒಂದೇ ಬಾರಿ ಕೊಂದರೆ ಅನುಮಾನ ಬರುವ ಸಾಧ್ಯತೆ ಇದೆ ಎಂದು ಪ್ಲಾನ್ ರೂಪಿಸಿದ ಪ್ರತಿಮಾ ಹಂತ ಹಂತವಾಗಿ ವಿಷವುಣಿಸಿದರೆ ಅಂಗಾಂಗಳು ಡ್ಯಾಮೇಜ್ ಆಗಿ ಗಂಡ ಸಾಯುತ್ತಾನೆ. ನಂತರ ಸಾಮಾನ್ಯ ಮರಣ ಎಂದು ಬಿಂಬಿಸಿದರೆ ನಮ್ಮ ಕಾರ್ಯ ಸಕ್ಸಸ್ ಅಂತ ಪ್ರತಿಮಾ ದುರಾಲೋಚನೆ ಮಾಡಿಕೊಂಡಿದ್ದಳು. ಆಕೆ ತನ್ನ ಪ್ಲಾನ್ ನಂತೆ ಪತಿಗೆ ಊಟದಲ್ಲಿ ವಿಷ ಬೆರೆಸಿ ನೀಡುತ್ತಿದ್ದು ಅದರಿಂದ ಪತಿ ಬಾಲಕೃಷ್ಣ ಅವರ ಕಿಡ್ನಿ ಮತ್ತು ಲಿವರ್ ಡ್ಯಾಮೇಜ್ ಆಗಿತ್ತು ಎಂದು ತಿಳಿದು ಬಂದಿದೆ. ದೇಹದ ನರಗಳು ಸಂವೇದನೆ ಕಳೆದುಕೊಂಡಿದ್ದವು. ಬಾಲಕೃಷ್ಣ ಪೂಜಾರಿ ಕಳೆದ 25 ದಿನಗಳಿಂದ ಜ್ವರ, ವಾಂತಿ ಅಂತ ಬಳಲುತ್ತಿದ್ದರು. ಗಂಡನಿಗೆ ಕಾಮಾಲೆ ರೋಗ ಬಂದಿದೆ ಎಂದು ಪ್ರತಿಮಾ ಹಲವು ಆಸ್ಪತ್ರೆಗಳಿಗೆ ಹೋಗಿ ನಾಟಕ ಕೂಡಾ ಮಾಡಿದ್ದಳು.

ಬಾಲಕೃಷ್ಣ ಅವರಿಗೆ ಮಣಿಪಾಲ ಕೆಎಂಸಿ, ಬೆಂಗಳೂರಿನ ನಿಮಾನ್ಸ್, ವಿಕ್ಟೋರಿಯಾ, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗಿತ್ತು. ಒಟ್ಟು 6 ಆಸ್ಪತ್ರೆಗಳಲ್ಲಿ ಗಂಡನಿಗೆ ಈಕೆ ಚಿಕಿತ್ಸೆ ಕೊಡಿಸಿದ್ದಳು. ಆದರೆ ಎಲ್ಲೋ ಒಂದು ಕಡೆ ತನ್ನ ಖತರ್ನಾಕ್ ಪ್ಲಾನ್ ಸಕ್ಸಸ್ ಆಗುತ್ತಿಲ್ಲ ಎಂದರಿತ ಪ್ರತಿಮಾ ತನ್ನ ಪತಿ ಬಾಲಕೃಷ್ಣ ಪೂಜಾರಿಯನ್ನು ಕೊಲೆಗೈಯಲು ಅ.20 ರಾತ್ರಿ 2 ಘಂಟೆಯ ವೇಳೆಯಲ್ಲಿ ಪ್ರಿಯಕರ ದಿಲೀಪ್ ಹೆಗ್ಡೆಯನ್ನು ಮನೆಗೆ ಕರೆಸಿಕೊಂಡಿದ್ದು ಪತಿಗೆ ತಿಳಿಯಬಾರದೆಂದು ಬಾತ್ ರೂಂನಲ್ಲಿ ಬಚ್ಚಿಟ್ಟಿದ್ದಳು ಎನ್ನುವ ಸ್ಫೋಟಕ ಅಂಶ ಗೊತ್ತಾಗಿದೆ. ಮಧ್ಯರಾತ್ರಿ ಗಾಢ ನಿದ್ರೆಯಲ್ಲಿದ್ದ ಬಾಲಕೃಷ್ಣ ಅವರಿದ್ದ ಕೋಣೆಗೆ ಎಂಟ್ರಿ ಕೊಟ್ಟ ಪ್ರತಿಮಾಳ ಲವ್ವರ್ ದಿಲೀಪ್ ಹೆಗ್ಡೆ ಬಾಲಕೃಷ್ಣ ಅವರು ನಿದ್ದೆಯಲ್ಲಿರುವಾಗಲೇ ತಲೆದಿಂಬುನಲ್ಲಿ ಉಸಿರುಗಟ್ಟಿಸಿದ್ದ, ಇದಕ್ಕೆ ಸಾಥ್ ನೀಡಿದ್ದ ಪ್ರತಿಮಾ ತನ್ನ ಗಂಡನ ಎದೆ‌ಯ ಮೇಲೆ ಗಟ್ಟಿಯಾಗಿ ಕೈಯಿಟ್ಟು, ಕಾಲನ್ನು ಕೂಡಾ ಒದ್ದಾಡದಂತೆ ಅದುಮಿಟ್ಟು ಇಬ್ಬರು ಸೇರಿ ಕೊಲೆ ಮಾಡಿದ್ದರು. ಕೊಲೆ ಮಾಡಿದ ಬಳಿಕ  ದಿಲೀಪ್ ಹೆಗ್ಡೆ ಮನೆಯಿಂದ ಹೊರಟು ಹೋಗಿದ್ದ.

ಮೃತ ಬಾಲಕೃಷ್ಣ ಅವರ ಶವದ ಮೇಲೆ ತುಟಿಯ ಭಾಗ ಹಾಗೂ ಗಲ್ಲದ ಭಾಗಗಳಲ್ಲಿ ಉಗುರಿನ ಗುರುತುಗಳಿದ್ದು ಮೂಗಿನ ಭಾಗ ಕೆಂಪಗಾಗಿತ್ತು. ಇದರಿಂದ ಅನುಮಾನಗೊಂಡ ಪ್ರತಿಮಾಳ ಅಣ್ಣ ಸಂದೀಪ್ ಅನುಮಾನ ವ್ಯಕ್ತಪಡಿಸಿ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಪೋಸ್ಟ್ ಮಾರ್ಟಂಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು . ಪೋಸ್ಟ್ ಮಾರ್ಟಂ ರಿಪೋರ್ಟ್‌ ಸಿಗುವ ಮೊದಲೇ ಪತಿ ಬಾಲಕೃಷ್ಣರ ಕೊಲೆ ಮಾಡಿದ್ದು ನಾನೆ‌, ದಿಲೀಪ್ ಕೂಡ ಸಾಥ್ ಕೊಲೆಗೆ ಸಾಥ್ ನೀಡಿದ್ದು ಎಂದು ಪತ್ನಿ ಪ್ರತಿಮಾ ಅಣ್ಣನ ಸಂದೀಪ್ ಬಳಿ ತಪ್ಪೊಪ್ಪಿ ಕೊಂಡಿದ್ದಾಳೆ. ಈ ಬಗ್ಗೆ ಅಣ್ಣ ಸಂದೀಪ್ ತಂಗಿ ಪ್ರತಿಮಾಳ ಧ್ವನಿಯನ್ನು ರೆಕಾರ್ಡ್ ಮಾಡಿ ಪೋಲೀಸರಿಗೆ ಒದಗಿಸಿದ್ದರು. ತನಿಖೆ ಮುಂದುವರಿದಿದೆ. ರೀಲ್ಸ್ ಮಾಡುವ ಹವ್ಯಾಸ ಹೊಂದಿರುವ ಪ್ರತಿಮಾ ತನ್ನ ಗಂಡನ ಜೊತೆಯೂ ಅನೇಕ ರೀಲ್ಸ್ ಗಳನ್ನು ಮಾಡಿದ್ದಳು. ರೀಲ್ಸ್ ಮೂಲಕವೇ ಪ್ರತಿಮಾಗೆ ದಿಲೀಪ್ ಪರಿಚಯ ಆಗಿದ್ದು ಬಳಿಕ ಅದು ಪ್ರೇಮಕ್ಕೆ ತಿರುಗಿ ಇಬ್ಬರು ಒಟ್ಟಿಗೆ ಸುತ್ತಾಡುವಲ್ಲಿಗೆ ಬಂದು ನಿಂತಿತ್ತು. ಇದೀಗ ರೀಲ್ಸ್ ರಾಣಿ ತನ್ನ ಗಂಡನನ್ನೇ “ಕರಿಮಣಿ ಮಾಲೀಕ ನೀನಲ್ಲ” ಎಂದು ಪರ್ಮನೆಂಟಾಗಿ ಮಾಡಿ ಬಿಟ್ಟಳಲ್ಲಾ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!