ಚೆಂಡು ಹೆಕ್ಕಲು ನದಿಗಿಳಿದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು
ಮಂಗಳೂರು: ಚೆಂಡು ಹೆಕ್ಕಲು ನದಿಗಿಳಿದ ಯುವಕನೋರ್ವ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಆ.23ರಂದು ಸಂಜೆ ಕಸಬಾ ಬೆಂಗ್ರೆಯ ಫೆರಿ ಪಾಯಿಂಟ್ ಬಳಿ ವರದಿಯಾಗಿದೆ.

ಮೃತರನ್ನು ಕಸಬಾ ಬೆಂಗರೆಯ ಮುಹಮ್ಮದ್ ಸನಾವುಲ್ಲಾ (25) ಎಂದು ಗುರುತಿಸಲಾಗಿದೆ. ಫೆರಿ ಪಾಯಿಂಟ್ ಬಳಿ ಮಕ್ಕಳು ಆಡುತ್ತಿದ್ದ ವೇಳೆ ಚೆಂಡು ನದಿಗೆ ಬಿದ್ದಿತ್ತು. ಅದನ್ನು ಹೆಕ್ಕಿ ಕೊಡಲು ಮುಹಮ್ಮದ್ ಸನಾವುಲ್ಲಾ ನದಿಗೆ ಇಳಿದಿದ್ದು, ಈ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ. ಈ ವಿಚಾರ ತಿಳಿದ ಬಳಿಕ ಸ್ಥಳೀಯರು ಹುಡುಕಾಟ ನಡೆಸಿ ಸನಾವುಲ್ಲಾರನ್ನು ಮೇಲಕ್ಕೆತ್ತಿ ಪ್ರಥಮ ಚಿಕಿತ್ಸೆ ನೀಡಿ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ತಂದೆ, ತಾಯಿ, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
ಘಟನಾ ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.


