ಕರಾವಳಿಕ್ರೈಂ

ಪುತ್ತೂರು ದರ್ಬೆ ಗಲಾಟೆ ಪ್ರಕರಣದ ತನಿಖೆ ಸಂಪೂರ್ಣವಾಗಿ ಸಾಕ್ಷ್ಯಾಧಾರಗಳು ಮತ್ತು ಕಾನೂನಿನ ಪ್ರಕಾರ ಪಾರದರ್ಶಕವಾಗಿ ನಡೆಯಲಿದೆ -ಎಸ್ಪಿ

ಪುತ್ತೂರು: ಪುತ್ತೂರು ದರ್ಬೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ, ಅಂಗಡಿಯಲ್ಲಿದ್ದ ಲ್ಯಾಮಿಲೇಶನ್ ಯಂತ್ರದಲ್ಲಾದ ತಾಂತ್ರಿಕ ಸಮಸ್ಯೆಯಿಂದಾಗಿ ದಾಖಲೆಯೊಂದು ಹಾನಿಗೊಳಗಾದ ಘಟನೆಯು ಉಲ್ಬಣಗೊಂಡು, ಆ ಬಳಿಕ ಸದ್ರಿ ಘಟನೆಗೆ ಕೋಮು ಬಣ್ಣ ನೀಡಲಾಗುತ್ತಿದೆ. ಪ್ರಕರಣದ ತನಿಖೆಯು ಸಂಪೂರ್ಣವಾಗಿ ಸಾಕ್ಷ್ಯಾಧಾರಗಳು ಮತ್ತು ಕಾನೂನಿನ ಪ್ರಕಾರ ಪಾರದರ್ಶಕವಾಗಿ ನಡೆಯಲಿದ್ದು, ಸಾರ್ವಜನಿಕರು ಯಾವುದೇ ವದಂತಿ ಗಳಿಗೆ ಕಿವಿಗೊಡದೇ ಶಾಂತಿ ಕಾಪಾಡಿಕೊಳ್ಳಬೇಕು ಎಂದು ದಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ  ತಿಳಿಸಿದ್ದಾರೆ.


ಲ್ಯಾಮಿಲೇಶನ್ ಯಂತ್ರದಲ್ಲಾದ ತಾಂತ್ರಿಕ ದೋಷದಿಂದ ದಾಖಲೆಯೊಂದು ಸುಟ್ಟುಹೋದಾಗ ಈ ಸಮಸ್ಯೆ ಪ್ರಾರಂಭವಾಗಿ, ಆ ಹಂತದಲ್ಲೇ ವಿಷಯವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬಹುದಾಗಿತ್ತು ಅಥವಾ ಅಗತ್ಯವಿದ್ದಲ್ಲಿ ಪೋಲಿಸ್ ಠಾಣೆ ಇಲ್ಲವೇ ಸೂಕ್ತ ಕಾನೂನು/ಗ್ರಾಹಕ ವೇದಿಕೆಯನ್ನು ಸಂಪರ್ಕಿಸುವುದು ಸೂಕ್ತ ಕ್ರಮವಾಗಿರುತ್ತಿತ್ತು. ಆದರೆ ಗ್ರಾಹಕರು ಅಂಗಡಿಯ ಕೆಲಸಗಾರನೊಂದಿಗೆ ಆಕ್ರೋಶದಿಂದ ವರ್ತಿಸಿದ್ದಾರೆ ಎನ್ನಲಾಗಿದ್ದು, ಅಂಗಡಿ ಮಾಲೀಕರಾದ ಅಂಜನಾ‌ ಪೈ ಎಂಬವರೂ ಕೂಡಾ ಗಲಾಟೆಯಲ್ಲಿ ಭಾಗಿಯಾಗಿರುತ್ತಾರೆ. ಘಟನೆಯ ಸಂದರ್ಭದಲ್ಲಿ ಸುದರ್ಶನ್ ಪೈ ಎಂಬಾತ ಮಧ್ಯಪ್ರವೇಶಿಸಿ, ಘಟನೆಯನ್ನು ವೀಡಿಯೊ ಚಿತ್ರೀಕರಿಸಲು ಯತ್ನಿಸುತ್ತಿದ್ದ ಇನ್ನೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುತ್ತಾನೆ. ಲಭ್ಯವಿರುವ ವೀಡಿಯೊ ದೃಶ್ಯಾವಳಿಗಳು ಘಟನೆಯಲ್ಲಿ ಭಾಗಿಯಾದ ವ್ಯಕ್ತಿಗಳ ಬಗ್ಗೆ ಸ್ಪಷ್ಟ ಸಾಕ್ಷ್ಯಾಧಾರವನ್ನು ಒದಗಿಸುತ್ತವೆ.


ಸುದರ್ಶನ್ ಪೈ ರವರನ್ನು ಪೋಲಿಸ್ ವಶಕ್ಕೆ ಪಡೆದ ನಂತರವೂ ಕೆಲವು ವ್ಯಕ್ತಿಗಳು ಅತಿರೇಕದಿಂದ ವರ್ತಿಸಿದ್ದು, ಆ ಪೈಕಿ ನೌಶಾದ್ ಎಂಬಾತನು ಪೋಲಿಸ್ ವಾಹನದೊಳಗೆ ಇಣುಕಿ ಏನೋ ಕೃತ್ಯವೆಸಗಿರುವುದು ಕಂಡುಬಂದಿದ್ದು, ಆ ವೇಳೆ ಸದ್ರಿ ಇಲಾಖಾ ವಾಹನದಲ್ಲಿ ಕುಳಿತಿದ್ದ ಸುದರ್ಶನ್ ಪೈ ರವರ ತಂದೆಯವರನ್ನೂ ವಿಚಾರಣೆಗೆ ನಡೆಸುವ ಮುಲಕ ಹಾಗೂ ಇತರ ಲಭ್ಯವಿರುವ ಸಾಕ್ಷ್ಯಾಧಾರಗಳಿಂದ ಸ್ಪಷ್ಟ ಚಿತ್ರಣ ಸಿಗಲಿದೆ. ಅದರ ಆಧಾರದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.


ಸುದರ್ಶನ್ ಪೈ ವಿರುದ್ಧ ಈಗಾಗಲೇ ಕೊಲೆ ಯತ್ನ ಮತ್ತು ಡ್ರಗ್ಸ್ ದಂಧೆಗೆ ಸಂಬಂಧಿಸಿದ ಪ್ರಕರಣಗಳು ಸೇರಿದಂತೆ ಹಳೆಯ ಕ್ರಿಮಿನಲ್ ಪ್ರಕರಣಗಳಿದ್ದು,  ನೌಶಾದ್ ವಿರುದ್ಧವೂ ಈ ಹಿಂದೆ‌ ನಡೆದ  ರಸ್ತೆ ಜಗಳದಲ್ಲಿ ಹಲ್ಲೆ‌ ನಡೆಸಿದ ಹಳೆಯ ಪ್ರಕರಣವಿರುತ್ತದೆ. ಸದಾಶಿವ ಪೈ ವಿರುದ್ಧವೂ ರಸ್ತೆ ಜಗಳದಲ್ಲಿ ಹಲ್ಲೆ‌ ನಡೆಸಿದ ಹಳೆಯ ಪ್ರಕರಣವಿರುತ್ತದೆ. ಇವರುಗಳನ್ನು ಹೊರತುಪಡಿಸಿ ಗಲಾಟೆಯ ವೇಳೆ ಅಂಗಡಿಯ ಮುಂದೆ ನೆರೆದಿದ್ದ ಇತರ ಇಬ್ಬರು ವ್ಯಕ್ತಿಗಳ ಮೇಲೆಯೂ ತಲಾ ಒಂದೊಂದು ಹಳೆಯ ಪ್ರಕರಣಗಳಿರುತ್ತದೆ.
ಪ್ರಸ್ತುತ ಪ್ರಕರಣದಲ್ಲಿ ಪೋಲಿಸರು ಭಾವನಾತ್ಮಕವಾಗಿ, ಸಾರ್ವಜನಿಕ ಒತ್ತಡ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ತೋರಿಸಲಾಗುವ ದೃಷ್ಟಿಕೋನದ ಆಧಾರದಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಘಟನೆಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳು, ನೈಜ ಸತ್ಯಾಂಶಗಳ ಆಧಾರದಲ್ಲಿ ಮತ್ತು ಕಾನೂನಿನಲ್ಲಿ ಅನ್ವಯವಾಗುವ ನಿಬಂಧನೆಗಳ ಆಧಾರದಲ್ಲೇ ಕಾರ್ಯನಿರ್ವಹಿಸಬೇಕಾಗುತ್ತದೆ.

ನೌಶಾದ್, ನಿಯಾಜ್, ಅಂಜನಾ‌ ಪೈ, ಸದಾಶಿವ ಪೈ, ಮತ್ತು ಇತರರ ಬಂಧನಕ್ಕೆ ಒತ್ತಾಯಿಸುತ್ತಿರುವ ಕುರಿತು:
ಯಾವುದೇ ವ್ಯಕ್ತಿ ಅಪರಾಧ ಎಸಗಿರುವುದು ಕಂಡುಬಂದಾಗ, ಆತನ ಧರ್ಮ, ಸಮುದಾಯ ಅಥವಾ ಸಾಮಾಜಿಕ ಗುರುತನ್ನು ಲೆಕ್ಕಿಸದೆ ಪೋಲಿಸರು ಅಂತಹ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಲಿದ್ದು, ಬಂಧನ ಮತ್ತು ಇತರ ಕಾನೂನು ಕ್ರಮಗಳು ಘಟನೆಯ ಸತ್ಯಾಸತ್ಯತೆ, ಸಾಕ್ಷ್ಯಾಧಾರಗಳು ಮತ್ತು ಕಾನೂನಿನ ಅಗತ್ಯತೆಗಳನ್ನು ಆಧರಿಸಿರುತ್ತದೆ. ಸಾರ್ವಜನಿಕರ ಅಥವಾ ಕೋಮು ಒತ್ತಡಕ್ಕೆ ಮಣಿದು ಯಾರನ್ನೂ ಬಂಧಿಸಲು ಸಾಧ್ಯವಿರುವುದಿಲ್ಲ.
ಪ್ರಸ್ತುತ ನಡೆಯುತ್ತಿರುವ ತನಿಖೆಯ ಬಗ್ಗೆ ಯಾವುದೇ ಸಂದೇಹಗಳಿದ್ದಲ್ಲಿ ಅಂತಹವರು  ತಮ್ಮಲ್ಲಿರುವ ಸತ್ಯಾಂಶಗಳೊಂದಿಗೆ ಬಂದು ಚರ್ಚಿಸಲು ಮುಕ್ತ ಅವಕಾಶವಿದೆ. ಯಾವುದೇ ಗೊಂದಲಗಳನ್ನು ನಿವಾರಿಸಲು ಎಲ್ಲಾ ಸತ್ಯಾಂಶಗಳನ್ನು ಮತ್ತು ಸಾಕ್ಷ್ಯಾಧಾರಗಳನ್ನು ಎಲ್ಲರ ಮುಂದೆ ಇಡಲು ಸಿದ್ಧವಿರುತ್ತೇವೆ.
ಈ ಘಟನೆಯನ್ನು ಕೋಮುವೈಷಮ್ಯದಿಂದ ಬಿಂಬಿಸಿ, ಸಮುದಾಯಗಳ ನಡುವೆ ದ್ವೇಶ ಸೃಷ್ಟಿಸಲು ಕೆಲವರು ಯತ್ನಿಸುತ್ತಿರುವಂತೆ ಕಂಡುಬರುತ್ತಿದ್ದು, ಸಾರ್ವಜನಿಕರು ಯಾವುದೇ ವದಂತಿಗಳ ನೈಜತೆಯನ್ನು ಪರಿಶೀಲಿಸದೇ, ಕೇವಲ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುವ ಪ್ರಚೋದನಕಾರಿ ಅಥವಾ ದಾರಿತಪ್ಪಿಸುವ ಹೇಳಿಕೆಗಳಿಗೆ ಮಹತ್ವ ಕೊಡಬಾರದು ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!