ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ, ಬಂದ್ಗೆ ಕರೆ: ಪ್ರಕರಣ ದಾಖಲು
ಪುತ್ತೂರು: ಇತ್ತೀಚೆಗೆ ದರ್ಬೆಯ ಅಂಗಡಿಯೊಂದರಲ್ಲಿ ನಡೆದ ಗಲಾಟೆಯ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ವೈಮನಸ್ಸು ಸೃಷ್ಟಿಸುವ ಹಾಗೂ ಸಾರ್ವಜನಿಕ ಶಾಂತಿ ಕದಡುವಂತಹ ಸಂದೇಶ ರವಾನಿಸಿದ ವ್ಯಕ್ತಿಯೊಬ್ಬನ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನೇಶ್ ಪಂಜಿಗ ಎಂಬ ವಾಟ್ಸಾಪ್ ಖಾತೆ ಹೊಂದಿರುವ ವ್ಯಕ್ತಿಯೇ ಈ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿಯು ವಾಟ್ಸಾಪ್ ಗ್ರೂಪ್ಗಳಲ್ಲಿ ಸಾರ್ವಜನಿಕ ವಲಯದಲ್ಲಿ ಭಯದ ವಾತಾವರಣ ನಿರ್ಮಿಸುವಂತಹ ಸಂದೇಶಗಳನ್ನು ಹರಡಿದ್ದ. ಅಲ್ಲದೆ, ಬಂದ್ಗೆ ಕರೆ ನೀಡಿ, ಸಾರ್ವಜನಿಕರು ಅಕ್ರಮವಾಗಿ ಗುಂಪುಗೂಡಿ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ದುಷ್ಪ್ರೇರಣೆ ನೀಡಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ


