ಕರಾವಳಿಕ್ರೈಂ

ಬೆಳ್ತಂಗಡಿ: ಕಾರು ಢಿಕ್ಕಿ ಹೊಡೆಸಿ ಕೊಲೆ ಯತ್ನ –ಆರೋಪಿ ಬಂಧನ

ಬೆಳ್ತಂಗಡಿ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಟಾಟಾ ಸುಮೊ ವಾಹನದಿಂದ ಢಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ ಆರೋಪಿಯನ್ನು ಧರ್ಮಸ್ಥಳ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಧರ್ಮಸ್ಥಳ ನಿವಾಸಿ ಶರತ್ (33) ಬಂಧಿತ ಆರೋಪಿ. ಕಲ್ಮಂಜ ಗ್ರಾಮದ ನಿವಾಸಿ ಬಾಲಕೃಷ್ಣ (43) ಗಾಯಗೊಂಡವರು.


ಘಟನೆಯ ವಿವರ:
ಬಾಲಕೃಷ್ಣ ಅವರಿಗೆ ಆರೋಪಿ ಶರತ್ ಕೆಲವು ತಿಂಗಳುಗಳ ಹಿಂದೆ ವಾಹನ ಢಿಕ್ಕಿ ಹೊಡೆಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಜು.30ರಂದು ಸಂಜೆ ಬಾಲಕೃಷ್ಣ ಅವರು ಕೆಲಸ ಮುಗಿಸಿ ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ, ಕೊಲ್ಲುವ ಉದ್ದೇಶದಿಂದ ಟಾಟಾ ಸುಮೊ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದ ಆರೋಪಿ, ಕುರುಮಾನಿ ಕ್ರಾಸ್ ಬಳಿ ದ್ವಿಚಕ್ರ ವಾಹನಕ್ಕೆ ಜೋರಾಗಿ ಢಿಕ್ಕಿ ಹೊಡೆಸಿದ್ದಾನೆ.


ಅಪಘಾತದಿಂದ ಗಂಭೀರ ಗಾಯಗೊಂಡ ಬಾಲಕೃಷ್ಣ ಅವರು ಆಸ್ಪತ್ರೆಗೆ ದಾಖಲಾಗಿ ಒಳರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಅ.ಕ್ರ: 52/2026, ಬಿಎನ್ಎಸ್ ಕಲಂ 109) ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಆಗಸ್ಟ್ 22 ರಂದು ಆರೋಪಿ ಶರತ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *

error: Content is protected !!