ಅಂತಾರಾಷ್ಟ್ರೀಯಕರಾವಳಿ

ತುಳು ಭಾಷೆಗೆ ಮಾನ್ಯತೆ: ತುಳುವರ ಹೆಮ್ಮೆಯ ಐತಿಹಾಸಿಕ ಕ್ಷಣ-ಡಾ.ರವಿ ಶೆಟ್ಟಿ

ಪುತ್ತೂರು: ಕರ್ನಾಟಕ ಸರ್ಕಾರವು ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವ ನಿಟ್ಟಿನಲ್ಲಿ ಕೈಗೊಂಡಿರುವ ನಿರ್ಧಾರವು ವಿಶ್ವದಾದ್ಯಂತ ಇರುವ ತುಳುವರಿಗೆ ಅತ್ಯಂತ ಸಂತಸದ ಹಾಗೂ ಹೆಮ್ಮೆಯ ಐತಿಹಾಸಿಕ ಕ್ಷಣವಾಗಿದ್ದು ಹಲವು ವರ್ಷಗಳಿಂದ ತುಳು ಭಾಷೆಯ ಉಳಿವು, ಬೆಳವಣಿಗೆ ಮತ್ತು ಮಾನ್ಯತೆಗಾಗಿ ಶ್ರಮಿಸಿದ ಎಲ್ಲಾ ತುಳು ಸಂಘ-ಸಂಸ್ಥೆಗಳು, ಹೋರಾಟಗಾರರು, ಮುಖಂಡರು ಹಾಗೂ ಸಮುದಾಯದ ಪ್ರತಿಯೊಬ್ಬರ ಪರಿಶ್ರಮಕ್ಕೆ ಇದು ದೊರೆತ ಫಲವಾಗಿದೆ ಎಂದು ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಕತಾರ್ ಇದರ ಅಧ್ಯಕ್ಷ ಮೂಡಂಬೈಲು ಡಾ. ರವಿ ಶೆಟ್ಟಿ ತಿಳಿಸಿದ್ದಾರೆ.



ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಆರೋಗ್ಯ ಸಚಿವ ಯು. ಟಿ. ಖಾದರ್, ಪುತ್ತೂರು ಶಾಸಕ ಅಶೋಕ್ ರೈ ಹಾಗೂ ಈ ಪ್ರಯತ್ನಕ್ಕೆ ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ತುಳು ಕೇವಲ ಒಂದು ಭಾಷೆಯಲ್ಲ, ಅದು ನಮ್ಮ ಅಸ್ಮಿತೆ, ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸದ ಪ್ರತೀಕವಾಗಿದೆ. ಈ ಮಹತ್ವದ ಹೆಜ್ಜೆಯೊಂದಿಗೆ, ತುಳುವನ್ನು ಭಾರತದ ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸುವ ನಮ್ಮ ಬಹುಕಾಲದ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದೆ ಇನ್ನಷ್ಟು ಬಲವಾಗಿ ಮುಂದುವರಿಸಬೇಕಾಗಿದೆ. ತುಳು ಭಾಷೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ ಎಂದು ಡಾ.ರವಿ ಶೆಟ್ಟಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!