ಮ್ಯಾಟ್ರಿಮೋನಿ ಆ್ಯಪ್ ಮೂಲಕ ಪರಿಚಯ: ಉದ್ಯಮಿಗೆ ರೂ.87.22 ಲಕ್ಷ ವಂಚನೆ
ಬೆಳ್ತಂಗಡಿ: ಮ್ಯಾಟ್ರಿಮೋನಿ ಆ್ಯಪ್ ಮೂಲಕ ಪರಿಚಯವಾದ ಮಹಿಳೆಯೊಬ್ಬರು ವಿವಿಧ ಕಾರಣಗಳನ್ನು ನೀಡಿ ಉದ್ಯಮಿಯಿಂದ ₹87.22 ಲಕ್ಷ ಪಡೆದು ವಂಚಿಸಿರುವ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ನಿವಾಸಿಯಾಗಿರುವ ಉದ್ಯಮಿಗೆ 2024ರ ಮೇ ತಿಂಗಳಲ್ಲಿ ಮ್ಯಾಟ್ರಿಮೋನಿ ಆ್ಯಪ್ ಮೂಲಕ ಅನಿಷಾ ಪಾಲನ್ನ (35) ಎಂಬ ಮಹಿಳೆ ಪರಿಚಯವಾಗಿದ್ದು, ಬಳಿಕ ಇಬ್ಬರೂ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದರು.
ದೂರಿನ ಪ್ರಕಾರ, 2024ರ ಸೆಪ್ಟೆಂಬರ್ 26ರಿಂದ 2025ರ ಜನವರಿ 20ರವರೆಗೆ ಆರೋಪಿತೆ ವಿವಿಧ ಕಾರಣಗಳನ್ನು ನೀಡಿ ಹಂತಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ₹87,22,710 ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾಳೆ. ನಂತರ ಮೊಬೈಲ್ ಸಂಪರ್ಕಕ್ಕೆ ಸಿಗದೇ, ಪಡೆದ ಹಣವನ್ನು ಹಿಂದಿರುಗಿಸದೆ ವಂಚನೆ ಎಸಗಿರುವುದಾಗಿ ಆರೋಪಿಸಲಾಗಿದೆ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 78/2026ರಡಿ ಕಲಂ 318(4) ಬಿಎನ್‌ಎಸ್-2023 ಅನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




