ಕರಾವಳಿಕ್ರೈಂ

ವಿಟ್ಲ: ಅಕ್ರಮ ಕೆಂಪು ಕಲ್ಲು ಮಣ್ಣು ಸಾಗಾಟ ಪತ್ತೆ: ಲಾರಿ ವಶಕ್ಕೆ



ಬಂಟ್ವಾಳ: ಕನ್ಯಾನ ಗ್ರಾಮದ ಬೈರಿಕಟ್ಟೆ ಎಂಬಲ್ಲಿ ಸಾರ್ವಜನಿಕ ರಸ್ತೆಯಲ್ಲಿ ದುರಸ್ತಿಗೀಡಾಗಿ ನಿಂತಿದ್ದ ಘನ ಲಾರಿಯಲ್ಲಿ ಅಕ್ರಮವಾಗಿ ಕೆಂಪು ಲ್ಯಾಟರೈಟ್ ಮಣ್ಣು ಸಾಗಾಟ ಮಾಡುತ್ತಿರುವುದು ವಿಟ್ಲ ಪೊಲೀಸರ ಪರಿಶೀಲನೆ ವೇಳೆ ಪತ್ತೆಯಾಗಿದೆ.



ಸಾರ್ವಜನಿಕ ರಸ್ತೆಯಲ್ಲಿ ಲಾರಿಯೊಂದು ದುರಸ್ತಿಗೀಡಾಗಿ ನಿಂತಿದ್ದು, ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಮಕೃಷ್ಣ ಅವರಿಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಘನ ಲಾರಿಯೊಂದು ರಸ್ತೆಯಲ್ಲಿ ನಿಂತಿರುವುದು ಕಂಡುಬಂದಿದೆ.



ಲಾರಿಯ ಚಾಲಕ ಹಾಸನ ಜಿಲ್ಲೆಯ ಸಕಲೇಶಪುರ ನಿವಾಸಿ ಇರ್ಫಾನ್ ಪಾಷಾ (40) ಎಂಬಾತನನ್ನು ವಿಚಾರಿಸಿದಾಗ, ಲಾರಿ ದುರಸ್ತಿಗೀಡಾಗಿರುವುದಾಗಿ ತಿಳಿಸಿದ್ದಾನೆ. ಬಳಿಕ ಲಾರಿಯಲ್ಲಿದ್ದ ಲೋಡ್ ಬಗ್ಗೆ ಪರಿಶೀಲಿಸಿದಾಗ ಯಾವುದೇ ಪರವಾನಗಿ ಹಾಗೂ ದಾಖಲೆಗಳಿಲ್ಲದೆ ಅಕ್ರಮವಾಗಿ ಕೆಂಪು ಲ್ಯಾಟರೈಟ್ ಮಣ್ಣು ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.


ಪೊಲೀಸರು ಲಾರಿಯನ್ನು ವಶಕ್ಕೆ ಪಡೆದುಕೊಂಡು ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 229/2026ರಂತೆ BNS 2023ರ ಕಲಂ 303(2), MMDR ಕಾಯ್ದೆ 1957ರ ಕಲಂ 4(1), 4(1A), 21 ಹಾಗೂ ಕರ್ನಾಟಕ ಸಣ್ಣ ಖನಿಜ ರಿಯಾಯಿತಿ ನಿಯಮಗಳು 1994ರ ಕಲಂ 3, 44ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!