ಭಾರೀ ಮಳೆಗೆ ಕೊಚ್ಚಿ ಹೋದ 3,000 ಸಿಲಿಂಡರ್ – ವೀಡಿಯೋ ವೈರಲ್!
ಮುಂಬೈ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಕಾರಣ ರಾಯಗಢ ಜಿಲ್ಲೆಯ ಪನ್ವೇಲ್ ತಾಲೂಕಿನ ಚವಾಣೆ ಗ್ರಾಮದಲ್ಲಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ ಪಾತಾಳಗಂಗಾ ಎಲ್‌ಪಿಜಿ ಬಾಟ್ಲಿಂಗ್ ಘಟಕಕ್ಕೆ ಪ್ರವಾಹದ ನೀರು ನುಗ್ಗಿದ್ದು, ಸುಮಾರು 3,000 ಅನಿಲ ಸಿಲಿಂಡರ್‌ಗಳು ನೀರಿನಲ್ಲಿ ತೇಲಿ ಹೋಗಿರುವ ಘಟನೆ ವರದಿಯಾಗಿದೆ.

ಪಾತಾಳಗಂಗಾ ನದಿಯ ಪ್ರವಾಹದ ಹೊಡೆತಕ್ಕೆ ಘಟಕದ ಆವರಣದಲ್ಲಿದ್ದ ಸಿಲಿಂಡರ್‌ಗಳು ನೀರಿನೊಂದಿಗೆ ಕೊಚ್ಚಿಕೊಂಡು ಹೋಗಿವೆ. ಕೆಲವು ಸಿಲಿಂಡರ್‌ಗಳಲ್ಲಿ ಅನಿಲ ತುಂಬಿದ್ದರೆ, ಇನ್ನೂ ಕೆಲವು ಖಾಲಿಯಾಗಿದ್ದವು ಎನ್ನಲಾಗಿದೆ.
ನದಿಯಲ್ಲಿ ನೂರಾರು ಎಲ್‌ಪಿಜಿ ಸಿಲಿಂಡರ್‌ಗಳು ತೇಲುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ.
ಈ ನಡುವೆ, ನದಿಯಲ್ಲಿ ತೇಲುತ್ತಿರುವ ಅಥವಾ ದಡಕ್ಕೆ ಬಂದು ಸೇರಿದ ಸಿಲಿಂಡರ್‌ಗಳ ಸ್ಥಿತಿ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಸಿಲಿಂಡರ್‌ನ ಬಳಿ ಹೋಗಬಾರದು, ಅದನ್ನು ಎತ್ತಿಕೊಳ್ಳಬಾರದು, ಸ್ಥಳಾಂತರಿಸಬಾರದು ಅಥವಾ ಮನೆಗೆ ತೆಗೆದುಕೊಂಡು ಹೋಗಬಾರದು ಎಂದು ಅಧಿಕಾರಿಗಳು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.




