ಶಾಲಾ ಬಸ್ ಗೆ ಟೂರಿಸ್ಟ್ ಬಸ್ ಡಿಕ್ಕಿ: 13 ವಿದ್ಯಾರ್ಥಿಗಳಿಗೆ ಗಾಯ
ಮಂಗಳೂರು: ಕೊಲ್ನಾಡು ಸಮೀಪ ಪ್ರವಾಸಿ ಮಿನಿ ಬಸ್ ಶಾಲಾ ಬಸ್ಸಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಶಾಲಾ ಬಸ್ ಚಾಲಕ ಸೇರಿದಂತೆ 14 ಮಂದಿ ಗಾಯಗೊಂಡ ಘಟನೆ ಅ.23ರಂದು ಸಂಜೆ ನಡೆದಿದೆ.

ಅ.23ರಂದು ಸಂಜೆ ಸುಮಾರು 3.40ರ ವೇಳೆಗೆ ಮುಲ್ಕಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಬೆಂಗಳೂರಿನ SRS ಟೂರಿಸ್ಟ್ ಸಂಸ್ಥೆಗೆ ಸೇರಿದ ಮಿನಿ ಬಸ್, ಮುಲ್ಕಿ ಕೊಲ್ನಾಡಿನ ಸುಂದರರಾಮ್ ಶೆಟ್ಟಿ ಸಭಾಂಗಣದ ಬಳಿ ನಿಂತಿದ್ದ ರಯಾನ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಶಾಲಾ ಬಸ್ಸಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಶಾಲಾ ಬಸ್ ಸಮೀಪದ ಚರಂಡಿಗೆ ಬಿದ್ದಿದ್ದು, ಬಸ್ಸಿನಲ್ಲಿದ್ದ 13 ವಿದ್ಯಾರ್ಥಿಗಳು ಹಾಗೂ ಚಾಲಕ ದೇವದಾಸ್ ಅವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಮುಕ್ಕದ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 248/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281 ಮತ್ತು 125(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

