ಕರಾವಳಿ

ಬೆಳಂದೂರು ಈಡನ್ ಗ್ಲೋಬಲ್ ಶಾಲೆಯಲ್ಲಿ ಇವಿಎಂ ಮೂಲಕ ವಿದ್ಯಾರ್ಥಿ ಸಂಘದ ಚುನಾವಣೆ





ಪುತ್ತೂರು: ಬೆಳಂದೂರು ಈಡನ್ ಗ್ಲೋಬಲ್ ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯು ವಿದ್ಯಾರ್ಥಿಗಳಲ್ಲಿ ಚುನಾವಣಾ ಪ್ರಕ್ರಿಯೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಭಾರತೀಯ ಚುನಾವಣಾ ಆಯೋಗದ ಎಲ್ಲಾ ನಿಯಮಗಳನ್ನು ಅನುಸರಿಸಿ ನಡೆಯಿತು.

ಸಂಸ್ಥೆಯ ಪ್ರಾಂಶುಪಾಲರು ಮತ್ತು ಮುಖ್ಯ ಚುನಾವಣಾಧಿಕಾರಿ ರಂಝಿ ಮುಹಮ್ಮದ್‌ರವರು ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದ್ದು, ಚುನಾವಣಾಧಿಕಾರಿ ಶಿಕ್ಷಕಿ ಉಬೈದಾ ಶಹರ್ ಬಾನುರವರ ನೇತೃತ್ವದಲ್ಲಿ ಸಂಪೂರ್ಣ ಚುನಾವಣಾ ಪ್ರಕ್ರಿಯೆ ನಡೆಯಿತು. ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂಪಡೆಯುವಿಕೆ, ಬಹಿರಂಗ ಪ್ರಚಾರ, ತರಗತಿ ಮಟ್ಟದ ಪ್ರಚಾರ, ಪ್ರಣಾಳಿಕೆ ಘೋಷಣೆ, ಸಂದರ್ಶನ, ಮಾಧ್ಯಮ ಚರ್ಚೆ ಹಾಗೂ ನೀತಿ ಸಂಹಿತೆಯ ಜಾರಿ ಎಂಬ ಎಲ್ಲಾ ಹಂತಗಳನ್ನು ಒಳಗೊಂಡು ಸಂಪೂರ್ಣ ಸಂವಿಧಾನಿಕ ಮಾದರಿಯಲ್ಲಿ ಚುನಾವಣೆ ನಡೆದಿದೆ.

 





‘ಸೋಲು-ಗೆಲುವು ಯಾವುದೇ ಬರಲಿ, ನಾಯಕತ್ವದ ಗುಣಗಳು ಶಾಲಾ ಹಂತದಲ್ಲಿಯೇ ಬೆಳೆಯಬೇಕು. ಈಡನ್ ಸಂಸ್ಥೆ ಶಾಲಾ ಮಟ್ಟದಲ್ಲಿಯೇ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಸಮರ್ಥವಾಗಿ ರೂಪಿಸುತ್ತಿದೆ. ನೀವೆಲ್ಲರೂ ಅತ್ಯುತ್ತಮ ನಾಯಕರಾಗಿ ಬೆಳೆಯಬೇಕು’ ಎಂದು ಸಂಸ್ಥೆಯ ಕಾರ್ಯದರ್ಶಿ ಬಶೀರ್ ಹಾಜಿ ಸವಣೂರು ಹಾಗೂ ಸಂಸ್ಥೆಯ ಟ್ರಸ್ಟಿ ಖಾದರ್ ಹಾಜಿ ಸವಣೂರು, ಪುತ್ತುಬಾವ ಹಾಜಿರವರು ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳನ್ನು ಭೇಟಿ ಮಾಡಿ ಶುಭ ಹಾರೈಸಿದರು. ಒಟ್ಟು 27 ಅಭ್ಯರ್ಥಿಗಳು 6 ವಿಭಾಗಗಳಲ್ಲಿ ತೀವ್ರ ಸ್ಪರ್ಧೆ ನಡೆಸಿದ್ದರು. ಚುನಾವಣೆಗೆ ಆಧುನಿಕ ತಾಂತ್ರಿಕ ಸ್ಪರ್ಶ ನೀಡುವ ನಿಟ್ಟಿನಲ್ಲಿ ಇವಿಎಂ (EVM) ಡಿಜಿಟಲ್ ಮಾದರಿಯಲ್ಲಿ ಮತದಾನ ನಡೆಯಿತು. ಈ ವೇಳೆ ಶೇ. 99.8ರಷ್ಟು ಮತದಾನ ಪ್ರಮಾಣ ದಾಖಲಾಯಿತು. ಜು.11ರಂದು ಚುನಾಯಿತ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ಈ ಚುನಾವಣೆಯು ವಿದ್ಯಾರ್ಥಿಗಳಲ್ಲಿ ಜವಾಬ್ದಾರಿ, ನಾಯಕತ್ವ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಬಲಪಡಿಸುವಲ್ಲಿ ಮಹತ್ವಪೂರ್ಣ ಪಾತ್ರ ವಹಿಸಿದೆ ಎಂದು ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!