ಉಪ್ಪಿನಂಗಡಿ: ಬೈಕ್ ಪಡೆದು ವಂಚನೆ, ಆರೋಪಿಯ ಬಂಧನ

ಉಪ್ಪಿನಂಗಡಿ: ಸ್ನೇಹಾಚಾರದ ನಾಟಕ ಮಾಡಿ ಸಲುಗೆ ಬೆಳೆಸಿಕೊಂಡು ದೇಗುಲಕ್ಕೆ ಹೋಗಿ ಬರುವೆನೆಂದು ತಿಳಿಸಿ ವ್ಯಕ್ತಿಯೋರ್ವರಿಂದ ಬೈಕ್ ಪಡೆದು ಬೈಕಿನೊಂದಿಗೆ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಗಿದ್ದಾರೆ.
ಕರ್ನಾಟಕ ಕೇರಳ ರಾಜ್ಯಗಳ ಗಡಿ ಪ್ರದೇಶವಾದ ಗಾಳಿಮುಖ ಎಂಬಲ್ಲಿ ತಲೆಮರೆಸಿಕೊಂಡಿದ್ದ, ಆರೋಪಿಯನ್ನು ಬೈಕ್ ಸಮೇತ ವಶಕ್ಕೆ ಪಡೆದುಕೊಳ್ಳಲಾಗಿದೆ.
ಇಲ್ಲಿನ ರಾಜಧಾನಿ ಟವರ್ಸ್ನಲ್ಲಿರುವ ಶ್ರೀ ದೇವಿ ಸ್ಟಿಕ್ಕರ್ ಕಟ್ಟಿಂಗ್ಸ್ ಸೆಂಟರ್ ಮಾಲಕ ಶೀನಪ್ಪ ಎಂಬವರಿಂದ ಅದೇ ಕಟ್ಟಡದಲ್ಲಿನ ಲಾಡ್ಜ್ ನಲ್ಲಿ ವಾಸ್ತವ ಹೂಡಿದ್ದ, ಶ್ಯಾಮ್ ಜಿ ಕೃಷ್ಣನ್
(31) ಎಂಬಾತ ಜೂ. 16 ರಂದು ‘ಒಮ್ಮೆ ಬೈಕ್ ಕೊಡಿ. ದೇವಸ್ಥಾನದಲ್ಲಿನ ನನ್ನ ಮನೆಯವರಿಗೆ ಬಟ್ಟೆ ಕೊಟ್ಟು ಎರಡೇ ನಿಮಿಷದಲ್ಲಿ ಹಿಂದಿರುಗುತ್ತೇನೆಂದು’ ತಿಳಿಸಿ ಬೈಕಿನೊಂದಿಗೆ ತೆರಳಿದಾತ ಬಳಿಕ ನಾಪತ್ತೆಯಾಗಿದ್ದ. ಆರೋಪಿಯು ದಿನ ನಿತ್ಯ ಶೀನಪ್ಪರವರಿಗೆ ಫೋನಾಯಿಸಿ ಹಣಕ್ಕಾಗಿ ಬೇಡಿಕೆಯನ್ನಿಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದರೂ ಆರೋಪಿಯ ಪತ್ತೆಯಾಗಿರಲಿಲ್ಲ. ಘಟನೆ ನಡೆದು ಏಳು ದಿನವಾದರೂ ಆರೋಪಿಯ ಬಂಧನವಾಗದಿದ್ದಾಗ ಸಾರ್ವಜನಿಕ ವಲಯದಿಂದ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಇದೀಗ ಪೊಲೀಸರು ಆರೋಪಿಯ ಫೋನ್ ಟ್ರ್ಯಾಕಿಂಗ್ ನಡೆಸಿ ಗಾಳಿಮುಖದಲ್ಲಿ ಆತನನ್ನು ಬಂಧಿಸಿ ಆತನಿಂದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.





