ಮನೆ ಸಮೀಪದ ಕೆರೆಗೆ ಬಿದ್ದು ಅವಳಿ ಮಕ್ಕಳು ಮೃತ್ಯು
ಸುಳ್ಯ: ಮನೆಯ ಸಮೀಪದ ಕೆರೆಯ ಬಳಿ ಆಟವಾಡುತ್ತಿದ್ದ ಅವಳಿ ಮಕ್ಕಳು ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಕಡೀರ ಎಂಬಲ್ಲಿ ಶನಿವಾರ ವರದಿಯಾಗಿದೆ.

ಮೃತರನ್ನು ಮುರುಳ್ಳ ಗ್ರಾಮದ ಕಡೀರ ವಸಂತ ಹಾಗೂ ದಿವ್ಯಾ ದಂಪತಿಯ ಅವಳಿ ಮಕ್ಕಳಾದ ಯಶ್ವಿನ್ (5) ಮತ್ತು ಜಸ್ಟಿತ್ (5) ಎಂದು ಗುರುತಿಸಲಾಗಿದೆ.
ಮುರುಳ್ಯ ಶಾಂತಿನಗರ ಪ್ರಾಥಮಿಕ ಶಾಲೆಯಲ್ಲಿ ಯುಕೆಜಿಯಲ್ಲಿ ಕಲಿಯುತ್ತಿರುವ ಮಕ್ಕಳಿಬ್ಬರು ಶಾಲೆ ಬಿಟ್ಟು ಮನೆಗೆ ಬಂದು ಆಟ ಆಡುತ್ತಾ ಮನೆಯ ಸಮೀಪದಲ್ಲಿರುವ 15 ಅಡಿ ಆಳದ ಕೆರೆಯತ್ತ ಹೋಗಿದ್ದ ವೇಳೆ ಆಕಸ್ಮಿಕವಾಗಿ ಕೆರೆಗೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ವಸಂತ ಅವರು ವೆಲ್ಡಿಂಗ್ ಕೆಲಸ ಮಾಡುತ್ತಿದ್ದು, ದಿವ್ಯಾ ಕೂಲಿ ಕೆಲಸಕ್ಕೆ ತೆರಳಿದ್ದರೆನ್ನಲಾಗಿದ್ದು, ಮನೆಯಲ್ಲಿ ಅಜ್ಜ ಮತ್ತು ಅಜ್ಜಿ ಮಾತ್ರ ಇದ್ದರೆನ್ನಲಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸುಳ್ಯ ಅಗ್ನಿಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಕೆರೆಯಿಂದ ಮಕ್ಕಳನ್ನು ಮೇಲಕ್ಕೆತ್ತಿದ್ದಾರೆ. ಬೆಳ್ಳಾರೆ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.





