ವಿಟ್ಲ: ಟಿಪ್ಪರ್ ಹರಿದು ಚಾಲಕ ಸ್ಥಳದಲ್ಲೇ ಮೃತ್ಯು
ವಿಟ್ಲ: ಟಿಪ್ಪರ್ ಲಾರಿಯೊಂದು ತನ್ನಿಂತಾನೆ ಚಲಿಸಿದ ಪರಿಣಾಮವಾಗಿ ಅದರ ಚಾಲಕ ಚಕ್ರದಡಿಗೆ ಸಿಲುಕಿ ಮೃತಪಟ್ಟ ಘಟನೆ ಜೂ.18ರಂದು ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಪಾದೆಕಲ್ಲು ಪೆರೋಡಿ ಸರವು ಗುಡ್ಡೆ ಎಂಬಲ್ಲಿ ನಡೆದಿದೆ.

ಮೃತ ಚಾಲಕನನ್ನು ಬೆಳ್ತಂಗಡಿ ತಾಲೂಕಿನ ಬಂದಾರು ನಿವಾಸಿ ಮಹೇಶ್ ಎಂದು ಗುರುತಿಸಲಾಗಿದೆ.
ಜೂ.18ರಂದು ಕನ್ಯಾನ ಗ್ರಾಮದ ಪಾದೆಕಲ್ಲು ಪೆರೋಡಿ ಸರವು ಗುಡ್ಡೆ ಎಂಬಲ್ಲಿ ಮಣ್ಣುಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಮಹೇಶ್ ಚಲಾಯಿಸುತ್ತಿದ್ದ ಟಿಪ್ಪರ್ ಲಾರಿಯನ್ನು ತರಲಾಗಿತ್ತು. ಲಾರಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಾಲಕ ಮಹೇಶ್ ರವರು ಲಾರಿಯನ್ನು ನಿಲ್ಲಿಸಿ ಅದರಡಿಗೆ ಹೋಗಿ ಸರಿಪಡಿಸುವ ಕೆಲಸದಲ್ಲಿ ತಲ್ಲೀನರಾಗಿದ್ದರು. ಈ ವೇಳೆ ಒಮ್ಮೆಲೆ ಲಾರಿ ಹಿಂದಕ್ಕೆ ಚಲಿಸಿದ ಪರಿಣಾಮ ಲಾರಿ ಚಾಲಕ ಮಹೇಶ್ ಮುಂದಿನ ಚಕ್ರದಡಿಗೆ ಸಿಲುಕಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ.





