ಕಡಬ: ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಪಲ್ಟಿ; ಇಬ್ಬರು ವಶಕ್ಕೆ
ಕಡಬ: ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ-ಬಿಸ್ಲೆ ರಸ್ತೆಯ ಡಿಪ್ಪೋ ಎಂಬಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪಿಕಪ್ ವಾಹನವೊಂದು ಆಯತಪ್ಪಿ ಪಲ್ಟಿಯಾದ ಘಟನೆ ಜೂನ್ 13ರಂದು ನಡೆದಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದಾರೆ.

ಹಾಸನ ಜಿಲ್ಲೆಯ ಅರಕಲಗೂಡು ನಿವಾಸಿಗಳಾದ ಚಂದ್ರು ಅಲಿಯಾಸ್ ಚಂದ್ರಶೇಖರ (ಚಾಲಕ) ಮತ್ತು ಮೋಹನ (ಕ್ಲೀನರ್) ಬಂಧಿತ ಆರೋಪಿಗಳು. ಇವರು ಪಿಕಪ್ ವಾಹನದಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದಾಗ, ಕುಲ್ಕುಂದ-ಬಿಸ್ಲೆ ರಸ್ತೆಯ ಡಿಪ್ಪೋ ಎಂಬಲ್ಲಿ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ವಾಹನ ಅಪಘಾತದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ, ಮುಂದಿನ ಕಾನೂನು ಕ್ರಮಕ್ಕಾಗಿ ಚಾಲಕ ಮತ್ತು ಕ್ಲೀನರ್ ಅನ್ನು ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕ ಆಂಜನೇಯ ರೆಡ್ಡಿ ಅವರಿಗೆ, ವಾಹನದಲ್ಲಿ ಅಕ್ರಮ ಜಾನುವಾರು ಸಾಗಾಟವಾಗುತ್ತಿರುವುದರ ಬಗ್ಗೆ ಮಾಹಿತಿ ದೊರೆತಿದೆ. ತಕ್ಷಣ ಆರೋಪಿಗಳನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿದಾಗ, ಜಾನುವಾರುಗಳನ್ನು ಮಾಂಸ ಮಾಡಿ ಮಾರಾಟ ಮಾಡುವ ದುರುದ್ದೇಶದಿಂದ ಹಿಂಸಾತ್ಮಕವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.
ವಾಹನ ಅಪಘಾತಕ್ಕೀಡಾದಾಗ ಆರೋಪಿಗಳು ಜಾನುವಾರುಗಳನ್ನು ವಾಹನದಿಂದ ಇಳಿಸಿ ಓಡಿಸಿದ್ದರು. ನಂತರ ಪೊಲೀಸರು ಕಾರ್ಯಾಚರಣೆ ನಡೆಸಿ, ಘಟನಾ ಸ್ಥಳದ ಸಮೀಪದಲ್ಲಿದ್ದ ಎರಡು ಜಾನುವಾರುಗಳನ್ನು ಪತ್ತೆ ಹಚ್ಚಿ ರಕ್ಷಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 21/2025 ರಡಿ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ಕರ್ನಾಟಕ ಗೋವುಗಳ ಸಂರಕ್ಷಣಾ ಮತ್ತು ಜಾನುವಾರು ಪ್ರತಿಬಂಧಕ ಕಾಯ್ದೆ-2020 (ಕಲಂ 4, 5, 7, 12), ಪ್ರಾಣಿ ಸಂರಕ್ಷಣಾ ಕಾಯ್ದೆ-1960 (ಕಲಂ 11(1)(D)) ಹಾಗೂ ಭಾರತೀಯ ಮೋಟಾರು ವಾಹನ ಕಾಯ್ದೆ-1988ರ ಕಲಂ 66, 192(A) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಅಪರಾಧ ಕೃತ್ಯಕ್ಕೆ ಬಳಸಿದ ಪಿಕಪ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ.




