ತೆಂಗಿನಕಾಯಿ ಬಿದ್ದು ಮಗು ದಾರುಣ ಮೃತ್ಯು
ಬ್ರಹ್ಮಾವರ: ತಾಯಿಯ ಕಂಕುಳಿನಲ್ಲಿದ್ದ ಮಗುವಿನ ಮೇಲೆ ನೇರವಾಗಿ ತೆಂಗಿನ ಕಾಯಿ ಬಿದ್ದು ಒಂದೂವರೆ ವರ್ಷದ ಗಂಡು ಮಗು ಮೃತಪಟ್ಟ ದಾರುಣ ಘಟನೆ ಬ್ರಹ್ಮಾವರದ ಹೆರಂಜೆಯಲ್ಲಿ ಸಂಭವಿಸಿದೆ.

ತಾಯಿಯು ಎಂದಿನಂತೆ 6 ವರ್ಷ ಪ್ರಾಯದ ದೊಡ್ಡ ಮಗುವನ್ನು ಶಾಲೆಗೆ ಬಿಡಲು ಹೊರಟಿದ್ದರು. ಈ ವೇಳೆ ಸಣ್ಣ ಮಗುವನ್ನು ಕೂಡ ಎತ್ತಿಕೊಂಡು ತಾಯಿ ಹೊರಟು ಸ್ವಲ್ಪ ದೂರ ಸಾಗುವಷ್ಟರಲ್ಲಿ ದಾರಿ ಬದಿಯಲ್ಲಿದ್ದ ತೆಂಗಿನ ತೋಟದಲ್ಲಿದ್ದ ಮರದಿಂದ ಅಚಾನಕ್ ಆಗಿ ತೆಂಗಿನ ಕಾಯಿ ನೇರವಾಗಿ ಮಗುವಿನ ತಲೆಗೆ ಬಿತ್ತು. ಕೂಡಲೇ ಸ್ಥಳೀಯರು ಸೇರಿ ಮಗುವನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ತಲೆಗೆ ಗಂಭೀರ ಏಟು ಆಗಿದ್ದರಿಂದ ಕೂಡಲೇ ಶಸ್ತ್ರ ಚಿಕಿತ್ಸೆ ನಡೆಸಿದರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಂಜೆಯ ವೇಳೆಗೆ ಮಗು ಕೊನೆಯುಸಿರೆಳೆದಿದೆ.





