ಕರಾವಳಿ

ಪುತ್ತೂರು ಪರಿಸರದಲ್ಲಿ ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ರಫೀಕ್ ದರ್ಬೆಯವರಿಂದ ನಗರಸಭೆಗೆ ಮನವಿ



ಪುತ್ತೂರು: ಮಳೆಗಾಲ ಪ್ರಾರಂಭವಾಗಿದ್ದು ಪುತ್ತೂರಿನ ಆಯ್ದ ಭಾಗಗಳಲ್ಲಿ ಕಣಿಗಳು ಮತ್ತು ತೋಡುಗಳಲ್ಲಿ ಗಿಡ ಗಂಟಿಗಳು ತುಂಬಿದ್ದು ಇದರ ಸ್ವಚ್ಚತೆಯನ್ನು ಶೀಘ್ರ ಮುಗಿಸಬೇಕಾಗಿದೆ, ಈಗಾಗಲೇ ನಗರಸಭೆಯಲ್ಲಿ ಚುನಾಯಿತ ಆಡಳಿತ ಸದಸ್ಯರು ಇಲ್ಲದಿದ್ದು ಸರಕಾರವೇ ನೇರ ಆಡಳಿತ ನಡೆಸುತ್ತಿದೆ.ಪುತ್ತೂರು ಪೇಟೆಯ ಆಯ್ದ ಭಾಗಗಳಲ್ಲಿ ಈ ವರ್ಷದ ಮಳೆಗೆ ರಸ್ತೆಗಳು ಮುಳುಗಡೆಯಾಗುವ ಪರಿಸ್ಥಿತಿ ಇರುವುದರಿಂದ ವಿಕೋಪಕ್ಕೂ ಮುನ್ನ ಅಗತ್ಯ ಕ್ರಮಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ, ನಮ್ಮ ಕರ್ನಾಟಕ ಒಕ್ಕೂಟದ ರಾಜ್ಯಾಧ್ಯಕ್ಷರಾದ ಮೊಹಮ್ಮದ್ ರಫೀಕ್ ದರ್ಬೆ ಅವರು ನಗರಸಭೆಗೆ ಮನವಿ ಮಾಡಿದ್ದಾರೆ.


ಪುತ್ತೂರು ಪರ್ಲಡ್ಕ ಬೈಪಾಸ್‌ನಿಂದ ಬಾಲವನ ರಸ್ತೆಯ ಎರಡೂ ಬದಿ ಕೆಲವು ಕಣಿಗಳನ್ನು ಸ್ವಚ್ಚಗೊಳಿಸುವ ನೆಪದಲ್ಲಿ ವಿರೂಪಗೊಳಿಸಲಾಗಿದೆ. ಕಸಗಳನ್ನು
ರಸ್ತೆ ಬದಿಗಳಲ್ಲೇ ಬಿಟ್ಟು ಹೋಗಿದ್ದು ಸಾರ್ವಜನಿಕ ಪಾದಚಾರಿಗಳಿಗೆ ನಡೆಯಲಾಗದ ಪರಿಸ್ಥಿತಿ ಎದುರಾಗಿದೆ. ಬೊಳ್ವಾರ್ ಹರಿಪ್ರಸಾದ್ ಹೋಟೆಲ್ ಹತ್ತಿರ ತೋಡು ಗಿಡಗಳಿಂದ ಮತ್ತು ಕೆಸರಿನಿಂದ ತುಂಬಿದ್ದು ಇದರ ಹೂಳೆತ್ತುವ ಕೆಲಸ ಶೀಘ್ರ ಆಗಬೇಕಾಗಿದೆ. ಹಿಂದಿನ ಬೋನಂತಾಯ ಆಸ್ಪತ್ರೆ ಹತ್ತಿರದ ತೋಡಲ್ಲಿ ಗಿಡಗಳು ಮತ್ತು ಮಣ್ಣು, ಕೆಸರು ತುಂಬಿದ್ದು ಇದರ ಸ್ವಚ್ಚತೆಯೊಂದಿಗೆ ಹೂಳೆತ್ತುವ ಕಾರ್ಯ ಆಗಬೇಕಾಗಿದೆ. ದರ್ಬೆ ಎಸಿಯವರ ಮನೆ ಇರುವಲ್ಲಿಂದ ಪರ್ಲಡ್ಕ ರಸ್ತೆಯಲ್ಲಿ ಎರಡೂ ಬದಿಗಳಲ್ಲಿ ಪಾದಚಾರಿಗಳಿಗೆ ನಡೆಯದ ಪರಿಸ್ಥಿತಿ, ಹಾಗೆ ರಸ್ತೆ ಎರಡೂ ಬದಿಗಳಲ್ಲಿ ಗಿಡಗಳು ಬೆಳೆದು ನೀರು ಹೋಗಲು ಆಗದ ಪರಿಸ್ಥಿತಿಯೊಂದಿಗೆ ಕಣಿಗಳು ಮುಚ್ಚಿಹೋಗಿರುತ್ತವೆ. ಬೊಳ್ವಾರ್ ಉಪ್ಪಿನಂಗಡಿ ತಿರುವು ಹತ್ತಿರ ರಸ್ತೆ ಹತ್ತಿರ ಮುಖ್ಯರಸ್ತೆಯನ್ನು ಅಗೆದು ಮುಚ್ಚಿ ಡಾಮರೀಕರಣ ಮಾಡದೆ ವಾಹನಗಳು ಕಷ್ಟ ಅನುಭವಿಸುತ್ತಿವೆ. ದರ್ಬೆ ಅಂಕಲ್ ಸ್ವೀಟ್ಸ್ ಹತ್ತಿರ ತೋಡು ಕಾಂಕ್ರಿಟೀಕರಣ ಮಾಡಿ ರಸ್ತೆ ಮಾಡಿದ್ದು ನೀರು ಹೋಗಲು ರಂದ್ರಗಳನ್ನು ನಿರ್ಮಿಸಿಲ್ಲ. ಇದರಿಂದ ಈ ಬಾರಿ ಆ ಪ್ರದೇಶ ಮಳೆಯಿಂದ ನಿರಂತರ ಮುಳುಗಡೆಯಾಗುವ ಸಂಭವ ಬರಲಿದೆ. ಮುಖ್ಯ ರಸ್ತೆಯ ಮಧ್ಯೆ ಕೆಲವು ಕಡೆಗಳ ಸಣ್ಣ ಪುಟ್ಟ ಗುಂಡಿಗಳಿಗೆ, ರಸ್ತೆ ಮಧ್ಯೆ ಒಡೆದು ಹೋದ ಜಾಗಕ್ಕೆ ಡಾಮರು ತೇಪೆಗಳನ್ನು ಹಾಕಿ ಆದಷ್ಟು ಬೇಗ ನಗರಸಭೆ ಪುತ್ತೂರಿನ ಎಲ್ಲಾ ಕಣಿಗಳನ್ನು ಸ್ವಚ್ಚಗೊಳಿಸಿ ರಸ್ತೆ ಬದಿ ಇರುವ ಎಲ್ಲಾ ಮಣ್ಣು ಕಸ ಕಡ್ಡಿಗಳನ್ನು ತೆಗೆದು ಸಾರ್ವಜನಿಕರಿಗೆ ಮುಕ್ತವಾಗಿಸಿ ಸ್ವಚ್ಛ ಪುತ್ತೂರನ್ನಾಗಿಸುವುದರೊಂದಿಗೆ ಡಾ|ಶಿವರಾಮ ಕಾರಂತರ ಬಾಲವನದಲ್ಲಿ ತುಕ್ಕು ಹಿಡಿದ ಮಕ್ಕಳ ಆಟದ ಸಾಮಾಗ್ರಿಗಳಿಗೆ ಶೀಘ್ರ ಪುನಶ್ಚತನಗೊಳಿಸಿ ಅಲ್ಲಿ ಸ್ವಚ್ಚತೆಗೆ ನಿರಂತರ ಎರಡು ವ್ಯಕ್ತಿಗಳನ್ನು ನೇಮಿಸಿ ಸ್ವಚ್ಚ ಬಾಲವನ ಆಗಿ ಪರಿವರ್ತಿಸಲು ಈ ಎಲ್ಲಾ ಪ್ರದೇಶಗಳಿಗೆ ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಶೀಘ್ರ ಸ್ಪಂದಿಸಿ ಸಾರ್ವಜನಿಕರಿಗೆ ಸಹಕಾರಿಯಾಗಲು ಪ್ರಯತ್ನಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!