ಶಿವಮೊಗ್ಗ: ಕ್ರೇನ್‌ನಡಿಗೆ ಸಿಲುಕಿ ಉಪ್ಪಿನಂಗಡಿ ಸಮೀಪದ ಕಾರ್ಮಿಕ ಮೃತ್ಯು
ಉಪ್ಪಿನಂಗಡಿ: ಕ್ರೇನ್ ನಡಿಗೆ ಸಿಲುಕಿ ಕಾರ್ಮಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶನಿವಾರ ಸಂಜೆ ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯ 3ನೇ ಕ್ರಾಸ್‌ನಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಬೆಳ್ತಂಗಡಿ ತಾಲೂಕಿನ ಉಪ್ಪಿನಂಗಡಿ ಸಮೀಪದ ಪಿಲಿಗೂಡು ಗ್ರಾಮದ ನಿವಾಸಿ ನಾಗೇಶ್ (45) ಮೃತಪಟ್ಟ ಕಾರ್ಮಿಕ ಎಂದು ಗುರುತಿಸಲಾಗಿದೆ.

ಕೆಲಸಕ್ಕಾಗಿ ನಾಗೇಶ್ ಅವರು ಶುಕ್ರವಾರ ಊರಿನಿಂದ ಶಿವಮೊಗ್ಗಕ್ಕೆ ಬಂದಿದ್ದರೆನ್ನಲಾಗಿದೆ.
ಕಲ್ಲುಗಳನ್ನು ಎತ್ತಿಕೊಂಡು ಕ್ರೇನ್ ಹಿಂದಕ್ಕೆ ಹೋಗುತ್ತಿದ್ದ ವೇಳೆ ನಾಗೇಶ್ ಎಡವಿ ಬಿದ್ದಿದ್ದಾರೆ. ಈ ಸಂದರ್ಭ ಕ್ರೇನ್ ಮುಂಭಾಗದ ಚಕ್ರಗಳು ನಾಗೇಶ್‌ರ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಶಿವಮೊಗ್ಗ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





