ವಿಟ್ಲ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಬರಹ ಪ್ರಸಾರ-ಆರೋಪಿಯ ಬಂಧನ
ವಿಟ್ಲ: ಧಾರ್ಮಿಕ ವಿಷಯವನ್ನು ಅವಹೇಳನಕಾರಿ ರೀತಿಯಲ್ಲಿ ಪ್ರಸ್ತುತಪಡಿಸಿ, ಸಮುದಾಯಗಳ ನಡುವೆ ವೈಮನಸ್ಸು ಉಂಟುಮಾಡುವ ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತರುವ ಬರಹವನ್ನು ವಾಟ್ಸಾಪ್ ಸ್ಟೇಟಸ್‌ನಲ್ಲಿ ಪ್ರಸಾರ ಮಾಡಿದ ಆರೋಪದಡಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ.

ಪೊಲೀಸ್ ಮಾಹಿತಿಯಂತೆ, ದೂರುದಾರರು ಸದಸ್ಯರಾಗಿರುವ KFC KHANDIGA ಎಂಬ ವಾಟ್ಸಾಪ್ ಗುಂಪಿನಲ್ಲಿ ಜುಲೈ 23ರಂದು ಒಂದು ಸ್ಕ್ರೀನ್‌ಶಾಟ್ ಹಂಚಿಕೆಯಾಗಿತ್ತು. ಅದರಲ್ಲಿ ಧಾರ್ಮಿಕ ವಿಷಯವನ್ನು ಅವಹೇಳನ ಮಾಡುವ ಹಾಗೂ ಸಮುದಾಯಗಳ ನಡುವೆ ದ್ವೇಷ ಉಂಟುಮಾಡುವ ರೀತಿಯ ಬರಹಗಳಿರುವುದನ್ನು ಗಮನಿಸಲಾಗಿದೆ.
ಪರಿಶೀಲನೆ ವೇಳೆ ಬಂಟ್ವಾಳ ಕೇಪು ನಿವಾಸಿ ಭರತ್ (36) ಎಂಬಾತನು ಅದೇ ಬರಹವನ್ನು ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಪ್ರಕಟಿಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ದೂರು ದಾಖಲಾದ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 160/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 197(1)(a), 197(1)(c) ಹಾಗೂ 353(2) ಅನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಪ್ರಕರಣದ ತನಿಖೆ ವೇಳೆ ಆರೋಪಿಯನ್ನು ಬಂಧಿಸಿ, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.




